ಮಂಗಳೂರು: ಪಿಲಿಕುಳದಲ್ಲಿ ಹಲಸು ಮೇಳ
ಮಂಗಳೂರು, ಜೂ. 24: ವಾಮಂಜೂರಿನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅರ್ಬನ್ ಹಾತ್ ನಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳದಲ್ಲಿ ಮಹಿಳಾ ಉದ್ಯಮಿಗಳ ತಾವರೆ ಕೃಷಿ, ಮಶ್ರೂಮ್ನಿಂದ ತಯಾರಿಸಲಾದ ತಿನಿಸುಗಳು ಗಮನ ಸೆಳೆಯುತ್ತಿವೆ.
ಎಂದಿನಂತೆ ಈ ಬಾರಿಯೂ ಪಿಲಿಕುಳದಲ್ಲಿ ಚಂದ್ರ ಹಲಸು, ರುದ್ರಾಕ್ಷಿ ಹಲಸಿಗೆ ಬೇಡಿಕೆ ಅಧಿಕವಾಗಿದ್ದು, ಹಲಸಿನ ಕಬಾಬ್, ಪೋಡಿ, ಗಾರಿಗೆ ಸೇರಿದಂತೆ ಹಲಸಿನ ನಾನಾ ಬಗೆಯ ಉತ್ಪನ್ನಗಳು, ಖಾದ್ಯಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಜಿಂಜರ್, ನನ್ನರಿ ಹೆಸರಿನಲ್ಲಿ ಮಂಗಳೂರಿನಲ್ಲಿ ಹೇರಳವಾಗಿ ದೊರೆಯುತ್ತಿದ್ದ ಬಣ್ಣ ಬಣ್ಣದ ಗೋಲಿಸೋಡಾ ಪ್ರಸಕ್ತ ನಾನಾ ರೀತಿಯ ರುಚಿ, ಬಣ್ಣಗಳೊಂದಿಗೆ ಲಭ್ಯವಿದ್ದು, ಪಿಲಿಕುಳದ ಹಲಸು ಮೇಳದಲ್ಲಿ ತರುಣ್ ಎಂಬವರ ಗೋಲಿಸೋಡಾ ಮಳಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಮೇಳದಲ್ಲಿ ಹಲಸು, ಮಾವುಗಳ ಜತೆಗೆ ರಾಂಬುಟನ್, ಮ್ಯಾಂಗ್ರೋಸ್ ಸೇರಿದಂತೆ ಹಲವು ವಿಧದ ಹಣ್ಣುಗಳ ಮಾರಾಟ ಪ್ರದರ್ಶನವಿದೆ. ಗಾಂಧಾರಿ ಮೆಣಸು, ಹಲಸು ಸೇರಿದಂತೆ ನಾನಾ ಬಗೆಯ ಹಣ್ಣುಗಳ ಐಸ್ಕ್ರೀಮ್, ಆರೋಗ್ಯಗರ ಪೇಯ, ಹಣ್ಣುಗಳ ಉಪ ಉತ್ಪನ್ನಗಳು ಹಾಗೂ ಇತರ ದಿನಬಳಕೆಯ ಸಾಮಗ್ರಿಗಳ ಮಳಿಗೆಗಳೂ ಮೇಳದಲ್ಲಿವೆ.
ಎರಡು ದಿನಗಳ ಹಲಸು ಮೇಳಕ್ಕೆ ಶನಿವಾರ ಬೆಳಗ್ಗೆ ಉಮಾನಾಥ್ ಎ. ಕೋಟ್ಯನ್ ಚಾಲನೆ ನೀಡಿದರು.
ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ, ಪಿಲಿಕುಳ ಆಯುಕ್ತ ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.