ಮಣಿಪುರ ಹಿಂಸಾಚಾರ: ಕೇಂದ್ರದ ಮಧ್ಯಪ್ರವೇಶಕ್ಕೆ ಉಡುಪಿ ಧರ್ಮಪ್ರಾಂತದಿಂದ ಮನವಿ ಸಲ್ಲಿಕೆ

Update: 2023-06-30 13:15 GMT

ಉಡುಪಿ: ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ ಹಾಗೂ ಕ್ರೈಸ್ತ ಸಮುದಾಯದ ಪರವಾಗಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರ ಮತ್ತು ಜೀವಹಾನಿ, ಆಸ್ತಿಪಾಸ್ತಿಗಳ ನಷ್ಟದಿಂದ ಸಾವಿರಾರು ಮಂದಿ ನಿರಾಶ್ರಿತರಾಗಿ ದ್ದಾರೆ ಎಂದರು.

ಬಹುಸಂಖ್ಯಾತ ಮಣಿಪುರಿಗಳು (ಮೈಟೈಸ್) ಮತ್ತು ಅಲ್ಪಸಂಖ್ಯಾತ ಬುಡಕಟ್ಟು ಜನರ (ಒಟ್ಟಾರೆಯಾಗಿ ಕುಕಿ/ಜೋಮಿ ಬುಡಕಟ್ಟುಗಳು ಎಂದು ಕರೆಯುತ್ತಾರೆ) ನಡುವಿನ ಅಂತರ-ಸಮುದಾಯ ಸಂಘರ್ಷದ ನೆಪದಲ್ಲಿ ವಿಸ್ತೃತ ಇಂಫಾಲ್ ಕಣಿವೆಯಲ್ಲಿ ಬಹುತೇಕ ಎಲ್ಲಾ ಚರ್ಚ್‌ಗಳನ್ನು ಸುಟ್ಟು ಹಾಕಲಾಗಿದೆ, ಧ್ವಂಸಗೊಳಿಸಲಾಗಿದೆ ಅಥವಾ ಅಪವಿತ್ರಗೊಳಿಸಲಾಗಿದೆ. ಕನಿಷ್ಠ ೩೧೭ ಚರ್ಚ್‌ಗಳು ಮತ್ತು ೭೦ ಚರ್ಚ್ ಆಡಳಿತ/ಶಾಲಾ ಕಟ್ಟಡಗಳನ್ನು ಸುಟ್ಟು ಹಾಕಲಾಗಿದೆ. ಕನಿಷ್ಠ ೭೫ ಮಂದಿ ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ಇದೊಂದು ಭಾರತ ಕಂಡ ಅತ್ಯಂತ ಕೆಟ್ಟ ಕ್ರೈಸ್ತ ವಿರೋಧಿ ಹಿಂಸಾಚಾರ ವಾಗಿದ್ದು ಸುಮಾರು ೩೦,೦೦೦ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿವರಿಸಿದರು.

ವಿವಿಧ ಗುಂಪುಗಳಿಂದ ಪ್ರಚೋದಿಸಲ್ಪಟ್ಟ ವಿಧ್ವಂಸಕ ಕೃತ್ಯವನ್ನು ಕ್ರೈಸ್ತ ಸಮುದಾಯ ಬಲವಾಗಿ ಖಂಡಿಸುತ್ತಿದ್ದು, ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಎಲ್ಲಾ ಮನೆಗಳು, ಚರ್ಚ್‌ಗಳು ಮತ್ತು ಹಾನಿಗೊಳಗಾದ ಆಸ್ತಿಗಳನ್ನು ಪುನರ್ನಿರ್ಮಿಸಬೇಕು ಮತ್ತು ಮನೆಗಳನ್ನು ಪುನರ್ನಿರ್ಮಿಸಲು ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದರು.

ಸರಕಾರವು ಈ ಪ್ರದೇಶದ ಹಿಂಸಾಚಾರವನ್ನು ಕೊನೆಗೊಳಿಸಬೇಕು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ತ್ವರಿತವಾಗಿ ಮರುಸ್ಥಾಪಿಸಬೇಕು ಮತ್ತು ಎಲ್ಲಾ ಸಂತ್ರಸ್ತ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಅದರ ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಮನವಿಯಲ್ಲಿ ಸರಕಾರವನ್ನು ಒತ್ತಾಯಿಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರು ಸಂಬಂಧ ಪಟ್ಟವರಿಗೆ ಮನವಿಯನ್ನು ತಲುಪಿಸಲಾಗುವುದು ಎಂದರು. ಮನವಿ ನೀಡಿದ ನಿಯೋಗದಲ್ಲಿ ಧರ್ಮಪ್ರಾಂತದ ಕುಲಪತಿ ವಂ.ಡಾ.ರೋಶನ್ ಡಿಸೋಜಾ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ನಿಯೋಜಿತ ಅಧ್ಯಕ್ಷ ರೊನಾಲ್ಡ್ ಡಿ’ಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ಮಾಜಿ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ, ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News