ಮೂಡುಬಿದಿರೆಯಲ್ಲಿ ಮಾಧ್ಯಮ ಹಬ್ಬ: ಪತ್ರಕರ್ತ ಪಾಶ್ರ್ವನಾಥಗೆ ಸನ್ಮಾನ
ಮೂಡುಬಿದಿರೆ: ಸಮಾಜದ ಅಂಕುಡೊಂಕು ತಿದ್ದುವ, ಸಮರ್ಥವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ. ಸಮಾಜಕ್ಕೆ ಉಪಯುಕ್ತ ಮಾಹಿತಿಯನ್ನು ನೀಡುವಂತಾಗಬೇಕು. ಮುಂದಿನ ವರ್ಷ ಮೂಡುಬಿದಿರೆಯಲ್ಲಿ ಸುಸಜ್ಜಿತ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ ನಡೆಯುವಂತಾಗಲಿ. ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಮೂಡುಬಿದಿರೆ ಪ್ರೆಸ್‍ಕ್ಲಬ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಶನಿವಾರ ಸಮಾಜಮಂದಿರದಲ್ಲಿ ಪತ್ರಿಕಾ ದಿನಚರಣೆ ಅಂಗವಾಗಿ ನಡೆದ ಮಾಧ್ಯಮ ಹಬ್ಬ 2023 ಅನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ರಜತ ಸಂಭ್ರಮಕ್ಕೆ ಚಾಲನೆ ನೀಡಿ, ಪರೋಪಕಾರದೊಂದಿಗೆ ನಡೆಸುವ ಜೀವನ ಸಾರ್ಥಕವೆನಿಸುತ್ತದೆ ಎಂದರು.
ನವ್ಯವಾಣಿ ಪತ್ರಿಕೆಯ ಸಂಪಾದಕ ಪಾಶ್ರ್ವನಾಥ ಜೈನ್ ಅವರನ್ನು ಸನ್ಮಾನಿಸಿಸಲಾಯಿತು.
ಸಂಘದ ಅಧ್ಯಕ್ಷ ಯಶೋಧರ ವಿ.ಬಂಗೇರ ಅಧ್ಯಕ್ಷತೆವಹಿಸಿದರು. ವಿಠಲ-ಶಾರದ ಭಾಗೀರಥಿ ಹೆಗಡೆಕಟ್ಟೆ ದತ್ತಿ ಉಪನ್ಯಾಸದಡಿ ಪತ್ರಕರ್ತ ಬಿ.ರವೀಂದ್ರ ಶೆಟ್ಟಿಯವರು ಪ್ರಚಲಿತ ಪತ್ರಿಕೋದ್ಯಮದ ಕುರಿತು ಮಾತನಾಡಿದರು.
ಪತ್ರಿಕಾ ಭವನ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಘೋಷಣೆ ಮಾಡಿದ ಉದ್ಯಮಿ ಶ್ರೀಪತಿ ಭಟ್ ಅವರನ್ನು ಗೌರವಿಸಲಾಯಿತು.
ಮಾಜಿ ಸಚಿವ, ಸಮಾಜಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ರೇಮಂಡ್ ತಾಕೊಡೆ ಮುಖ್ಯ ಅತಿಥಿಯಾಗಿದ್ದರು.
ವೇಣುಗೋಪಾಲ ಕಾರ್ಯಕ್ರಮ ನಿರೂಪಿಸಿದರು. ಎಂ. ಗಣೇಶ್ ಕಾಮತ್ ಸನ್ಮಾನ ಪತ್ರ ವಾಚಿಸಿದರು. ಸೀತಾರಾಮ ಆಚಾರ್ಯ ಅತಿಥಿ ಪರಿಚಯಿಸಿದರು. ಕಾರ್ಯದರ್ಶಿ ಪ್ರೇಮಶ್ರೀ ವಂದಿಸಿದರು. ಹರೀಶ್ ಕೆ.ಅದೂರು, ಪ್ರಸನ್ನ ಹೆಗ್ಡೆ, ನವೀನ್ ಸಾಲ್ಯಾನ್, ಅಶ್ರಫ್ ವಾಲ್ಪಾಡಿ, ಜೈಸನ್ ತಾಕೊಡೆ, ಶರತ್ ದೇವಾಡಿಗ, ಪುನೀತ್ ಉಪಸ್ಥಿತರಿದ್ದರು.