ಕರಾವಳಿ ಪ್ರಾಧಿಕಾರದ ಅನುದಾನವನ್ನು ರಸ್ತೆ, ನಗರಾಭಿವೃದ್ಧಿಗೆ ಬಳಸದಂತೆ ಸಚಿವ ಸುಧಾಕರ ತಾಕೀತು

Update: 2023-07-01 14:04 GMT

ಮಂಗಳೂರು, ಜು.1: ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಅನುದಾನವನ್ನು ಮೀನುಗಾರಿಕೆ , ಕಾಲುಸಂಕ ನಿರ್ಮಾಣ, ತೂಗುಸೇತುವೆ, ಕರಾವಳಿ ತಟದ ಶಾಲೆಗಳ ಅಭಿವೃದ್ಧಿಗೆ ಬಳಕೆ ಮಾಡಬೇಕು. ನಿಗದಿತ ಉದ್ದೇಶವನ್ನು ಬದಿಗಿಟ್ಟು ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣ ಮತ್ತು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಬಾರದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ತಾಕೀತು ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವರ್ಷ 30 ಕೋಟಿ ರೂ.ಅನುದಾನ ಬಂದಿದ್ದು, ಆದರೆ ಪ್ರಾಧಿಕಾರ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನು ಗಮನಿಸಿದರೆ, ಶೇ 90ರಷ್ಟು ಅನುದಾನ ರಸ್ತೆ ನಿರ್ಮಾಣಕ್ಕೆ ಬಳಕೆಯಾಗಿದೆ. ಮುಂದೆ ಈ ರೀತಿ ಆಗಬಾರದು.ನಿಗದಿತ ಉದ್ದೇಶಕ್ಕೆ ಅನುದಾನ ಬಳಕೆಯಾಗಬೇಕು ಎಂದರು.

ರಾಜ್ಯದ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರದೇಶಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಲು ಹೆಚ್ಚಿನ ಒತ್ತು ನೀಡಲಾಗುವುದು, ಈ ವಿಚಾರದಲ್ಲಿ ಮೂರು ಜಿಲ್ಲೆಗಳ ಶಾಸಕರು ಹಾಗೂ ವಿಧಾನ ಪರಿಷತ್ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಅವರು ತಿಳಿಸುವ ಪ್ರದೇಶಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಂಡಳಿಯಾಗಿ ಪರಿವರ್ತಿಸುವ ಚಿಂತನೆ ಮುಂಬರುವ ದಿನಗಳಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಪರಿವರ್ತಿಸುವ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಅದನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನರ್ ನಾಮಕರಣ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಈ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ, ಅದನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನರ್ ನಾಮಕರಣ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮಾಹಿತಿ ನೀಡಿ, ‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಗೊಳಪಟ್ಟಿರುವ ಪ್ರಾಧಿಕಾರವು ಈವರೆಗೆ 580 ಕಾಲುಸಂಕಗಳನ್ನು ನಿರ್ಮಾಣ ಮಾಡಿದೆ. ಮೂರೂ ಜಿಲ್ಲೆಗಳು ಸೇರಿದಂತೆ ಇನ್ನೂ 350ಕ್ಕೂ ಹೆಚ್ಚು ಕಾಲುಸಂಕಗಳಿಗೆ ಬೇಡಿಕೆ ಇದೆ. ಹೊಸ ಯೋಜನೆಗಳಿಗೆ 25 ಕೋಟಿ ರೂ.ಗಳ ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು. ‘ಮಂಗಳೂರು ನಗರಕ್ಕೆ ಸ್ಮಾರ್ಟ್‌ ಸಿಟಿ ಯೋಜನೆ ಇರುವಾಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ನಿರ್ಮಾಣ ಮಾಡಿದ್ದು ಯಾಕೆ? ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ಗೆ 1.50 ಕೋಟಿ ರೂ.ಅನುದಾನ ನೀಡಲಾಗಿದೆ. ಪಿಲಿಕುಳದಲ್ಲಿ ರಸ್ತೆ ನಿರ್ಮಾಣವಾಗಿದೆ. ಬಹುಪಾಲು ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ನೀಡಿ, ಪ್ರಾಧಿಕಾರಕ್ಕೆ ಅನುದಾನ ಇಲ್ಲ ಎಂದರೆ ಹೇಗೆ’ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಪ್ರಾಧಿಕಾರದ ಕಾಮಗಾರಿಗಳಿಗೆ ವ್ಯಾಪ್ತಿ ನಿಗದಿಪಡಿಸಬೇಕು. ಕರಾವಳಿಯ ಮೀನುಗಾರಿಕೆ, ಕಾಲುಸಂಕ, ತೂಗುಸೇತುವೆ ಇಂತಹ ಉದ್ದೇಶಗಳಿಗೆ ಪ್ರಾಧಿಕಾರದ ಅನುದಾನ ಸದ್ಬಳಕೆಯಾಗಬೇಕು.ಸಮುದ್ರ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತ್ತಿಕೊಳ್ಳಬಹುದು ಎಂದು ಸಲಹೆ ಮಾಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನವನ್ನು ಹೇಗೆ ?ಯಾವ ರೀತಿಯಲ್ಲಿ ಬಳಸಬೇಕು ಎಂಬುವುದರ ಬಗ್ಗೆ ಸೂಕ್ತ ರೂಪರೇಷೆಗಳನ್ನು ಒಳಗೊಂಡ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಸಂಬಂಧ ಆದೇಶ ಹೊರಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್ , ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News