ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆ; ಶಾಲೆ, ಎರಡು ಮನೆಗಳಿಗೆ ಹಾನಿ
ಉಡುಪಿ, ಜೂ.30: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸಾಧಾರಣ ಮಳೆ ಬಿದ್ದಿದ್ದು, ಎರಡು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿವೆ. ಆಗಾಗ ಮಳೆ ಸುರಿಯುತಿದ್ದರೂ, ಮದ್ಯದಲ್ಲಿ ತಿಳಿ ವಾತಾವರಣ ಕಂಡುಬರುತ್ತಿತ್ತು.
ಕಳೆದ 24ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 38.6ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಮಾತ್ರ ಭಾರೀ ಮಳೆಯಾಗಿದ್ದು, ಅಲ್ಲಿ ಅತ್ಯಧಿಕ 71.5 ಮಿ.ಮೀ. ಮಳೆ ಸುರಿದಿದೆ. ಉಳಿದಂತೆ ಕುಂದಾಪುರದಲ್ಲಿ 46.1, ಕಾಪುವಲ್ಲಿ 29.0, ಕಾರ್ಕಳದಲ್ಲಿ 27.7, ಬ್ರಹ್ಮಾವರ ಮತ್ತು ಹೆಬ್ರಿಗಳಲ್ಲಿ 26.0ಮಿ.ಮೀ. ಹಾಗೂ ಉಡುಪಿಯಲ್ಲಿ 23.8 ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಎರಡು ಮನೆಗಳಿಗೆ ಗಾಳಿ-ಮಳೆಯಿಂದ ಹಾನಿಯಾಗಿದೆ. ಶಾಂತನಾಯ್ಕ ಎಂಬವರ ಮನೆಗೆ 20ಸಾವಿರ ರೂ. ಹಾಗೂ ಗಂಗಾ ಎಂಬವರ ಮನೆಗೆ 30,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ಇನ್ನು ವಡ್ಡರ್ಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗ್ರಂಥಾಲಯ ಕಟ್ಟಡ ಬುಧವಾರ ರಾತ್ರಿ ಮಳೆಗೆ ಕುಸಿದು ಬಿದ್ದಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಶತಮಾನದ ಹೊಸ್ತಿಲಲ್ಲಿದ್ದ ಈ ಶಾಲೆಯ ಶಿಥಿಲಾವಸ್ಥೆಯಲ್ಲಿದ್ದ ಒಂದು ಕೊಠಡಿಯ ಮಾಡು ಮಳೆಗೆ ಮುರಿದು ಬಿದ್ದು ಇದರಿಂದ ಪಕ್ಕದ ಗೋಡೆ ಸಹ ಹಾನಿಗೊಂಡಿದೆ. ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲೆಗೆ ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ನೀಡಿದ್ದು, ಜು.4ಮತ್ತು 5ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ದಿನದ ಗರಿಷ್ಠ ಉಷ್ಣಾಂಶ 28.28 ಡಿಗ್ರಿ ಸೆ. ಇದ್ದು, ಕನಿಷ್ಠ ಉಷ್ಣಾಂಶ 23.83ಡಿಗ್ರಿ ಸೆ. ಕಂಡುಬಂದಿದೆ. ಮುಂದಿನ 24ಗಂಟೆಗಳಲ್ಲಿ ಬಿರುಗಾಳಿ, ಗುಡುಗು-ಮಿಚು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.