ಮೇಲ್ಸೇತುವೆ ಕಾಮಗಾರಿಗಿರುವ ಅಡೆತಡೆ ನಿವಾರಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ

Update: 2023-07-01 17:39 GMT

ಮಂಗಳೂರು, ಜು.1: ನಂತೂರು, ಕೆಪಿಟಿ ಹಾಗೂ ಕೂಳೂರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗೆ ಎದುರಾಗಿರುವ ಅಡೆತಡೆ ಯನ್ನು ನಿವಾರಿಸಿ ವಾರದೊಳಗೆ ಕಾಮಗಾರಿ ಆರಂಭಿಸುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅವರು ಶನಿವಾರ ಇಲ್ಲಿನ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ(ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

*15 ದಿನಕ್ಕೊಮ್ಮೆ ಪರಿಶೀಲನೆಗೆ ಡಿಸಿಗೆ ಸೂಚನೆ: ಎನ್‌ಎಚ್‌ಐಎ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಎಲ್ಲ ಕಾಮಗಾರಿ ಪ್ರಗತಿ ಕುರಿತಂತೆ ಪ್ರತಿ 15 ದಿನಕ್ಕೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.

ಬ್ರಹ್ಮರಕೂಟ್ಲುವಿನಲ್ಲಿ ಬ್ರಹ್ಮಸ್ಥಾನ ಸ್ಥಳಾಂತರಗೊಂಡರೆ, ಅಲ್ಲಿ ನಾಲ್ಕು ಪಥದ ಕಾಮಗಾರಿ ನಡೆಸಬೇಕು. ಸುರತ್ಕಲ್‌ನ ಎನ್‌ಐಟಿಕೆ ಹಳೆ ಟೋಲ್‌ಗೇಟ್‌ನು ತೆರವುಗೊಳಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

*ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರ ನೇಮಿಸಲು ಸೂಚನೆ : ದ.ಕ. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿಲ್ಲದ ಇಂಗ್ಲಿಷ್ ಹಾಗೂ ಹಿಂದಿ ಭಾಷೆಮಾತ್ರ ಗೊತ್ತಿರುವ ಅಧಿಕಾರಿಗಳಿಂದಾಗಿ ಗ್ರಾಮೀಣ ಜನತೆಗೆ ವಹಿವಾಟು ನಡೆಸಲು ಭಾಷಾ ತೊಡಕು ಉಂಟಾಗುತ್ತಿದೆ. ಗ್ರಾಮೀಣ ಜನತೆ ಸಹಕಾರಿ ಬ್ಯಾಂಕ್‌ಗಳತ್ತ ಮುಖಮಾಡುವಂತಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕನ್ನಡ ಗೊತ್ತಿರದ ಅಧಿಕಾರಿ, ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸಿ ಜಿ.ಪಂ.ಗೆ ಸಲ್ಲಿಸಿ, ಬ್ಯಾಂಕ್‌ಗಳಲ್ಲಿ ಕನ್ನಡ ಗೊತ್ತಿರುವವರನ್ನು ನೋಡೆಲ್ ಆಗಿ ನೇಮಕಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು.

*ಕಾಮಗಾರಿ ತಡೆದರೆ ಮತ್ತೆ ವಿಳಂಬ: ಟೆಂಡರ್ ಹಂತದಲ್ಲಿರುವ ಕಾಮಗಾರಿಗೆ ರಾಜ್ಯ ಸರ್ಕಾರ ತಡೆಹಿಡಿದೆ. ಇದರಿಂದಾಗಿ ಮತ್ತೆ ಕಾಮಗಾರಿ ನಡೆಸಬೇಕಾದರೆ, ಎಲ್ಲ ಕಡತಗಳು ಬೆಂಗಳೂರಿಗೆ ಹೋಗಿ ಮರು ಅನುಮೋದನೆಗೊಂಡು ಬರಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಸೇರಿದಂತೆ ವಿವಿಧ ಕಾಮಗಾರಿ ಅನುಷ್ಠಾನಗೊಳ್ಳದೆ ಆರಂಭದಲ್ಲೇ ವಿಳಂಬವಾಗುವಂತೆ ಆಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಅನುಷ್ಠಾನವಾಗುತ್ತಿದೆ. ಆದರೆ ಬದಿಬದಿಗಳಲ್ಲಿ ತಳ್ಳುಗಾಡಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಜಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ವೇದವ್ಯಾಸ್ ಕಾಮತ್ ಆಗ್ರಹಿಸಿದರು.

ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸ್ಕೆಚ್‌ನಂತೆಯೇ ನಡೆಸಬೇಕು. ಇಲ್ಲಿ ಮಾಜಿ ಶಾಸಕರು ಹಸ್ತಕ್ಷೇಪಕ್ಕೆ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.

ನಿಗದಿತ ಸ್ಕೆಚ್ ಪ್ರಕಾರವೇ ಕಾಮಗಾರಿ ನಡೆಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ನಳಿನ್ ಕುಮಾರ್ ಸೂಚಿಸಿದರು.

ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ಜಿ.ಪಂ. ಸಿಇಒ ಡಾ.ಆನಂದ್, ಪಾಲಿಕೆ ಆಯುಕ್ತ ಆನಂದ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News