ಮುರಲಿ ಕಡೆಕಾರ್‌ಗೆ ‘ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್’ ಪ್ರಶಸ್ತಿ ಪ್ರದಾನ

Update: 2023-07-08 15:50 GMT

ಕುಂದಾಪುರ, ಜು.8: ನಿಟ್ಟೂರು ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಇಂದು ಅಂಕದಕಟ್ಟೆಯ ಸಹನಾ ಕನ್ವೆನ್ಷನ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರ ದೊಂದಿಗೆ ಆಯೋಜಿಸಿದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ 325 ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿ ಗಳಿಗೆ ಒಟ್ಟು 41,000 ಶಾಲಾ ಸಮವಸ್ತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನಿಲ್‌ಕುಮಾರ್ ಮಾತನಾಡಿ, ಅನ್ನ, ಆರೋಗ್ಯ, ಅಕ್ಷರದ ವಿಚಾರದಲ್ಲಿ ವ್ಯಾಪಾರ ಮಾಡಬಾರದು. ಆದರೆ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಹಾಗೂ ಆರೋಗ್ಯ ವ್ಯಾಪಾರೀಕರಣವಾಗುತ್ತಿರುವುದು ದುರಂತ ಎಂದರು.

ಈ ನಿಟ್ಟಿನಲ್ಲಿ ತನ್ನ ವ್ಯವಹಾರದಲ್ಲಿ ಬಂದ ಲಾಭದ ಹಣದ ಸಿಂಹಪಾಲನ್ನು ಎಚ್.ಎಸ್.ಶೆಟ್ಟಿ ಅವರು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು ಈ ಪರಂಪರೆ ಇನ್ನಷ್ಟು ಹೆಚ್ಚಬೇಕು ಎಂದರು.

ಅನುದಾನಿತ ಶಾಲೆಯ ಸಂಘಟಕರಿಂದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಉಡುಪಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ಅಧ್ಯಕ್ಷ ಎಚ್.ಎಸ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿ, ಚಾರಿಟೆಬಲ್ ಸೊಸೈಟಿ ಖಜಾಂಚಿ ಹಾಲಾಡಿ ರಾಜೀವ ಶೆಟ್ಟಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News