ಪುನೀತ್ ಕೆರೆಹಳ್ಳಿಯಂತಹ ನಟೋರಿಯಸ್ ಕ್ರಿಮಿನಲ್ ಮೇಲೆ ರೌಡಿ ಶೀಟ್ ತೆರೆಯುವುದು ಒಂದು ಸಂಗತಿಯೇ ಅಲ್ಲ: ಮುನೀರ್ ಕಾಟಿಪಳ್ಳ
ಮಂಗಳೂರು: ಪುನೀತ್ ಕೆರೆಹಳ್ಳಿಯಂತಹ ನಟೋರಿಯಸ್ ಕ್ರಿಮಿನಲ್ ಮೇಲೆ ರೌಡಿ ಶೀಟ್ ತೆರೆಯುವುದು ಒಂದು ಸಂಗತಿಯೇ ಅಲ್ಲ. ಅದು ಈ ಮೊದಲೇ ಆಗಬೇಕಿತ್ತು. ಗುಂಪು ಘರ್ಷಣೆ ಸೆಕ್ಷನ್, 307 ಸೆಕ್ಷನ್ ಅಡಿ ಒಂದು ಪ್ರಕರಣ ದಾಖಲಾದವರ ಮೇಲೂ ರೌಡಿ ಶೀಟ್ ತೆರೆದ ಹಲವು ಉದಾಹರಣೆಗಳಿವೆ. ಸಾಮಾನ್ಯವಾಗಿ ನಟೋರಿಯಸ್ ಕ್ರಿಮಿನಲ್ ಗಳಿಗೆ ಶಾಂತಿ ಭಂಗ, ಮುನ್ನಚ್ಚರಿಕೆ ಬಾಂಡ್, ಪೊಲೀಸ್ ಪರೇಡ್ ಗೆ ಕರೆ ಸಮನ್ಸ್/ ಕರೆ ಬಂದಾಗಲಷ್ಟೆ ತಮ್ಮ ಮೇಲೆ ರೌಡಿ ಶೀಟ್ ತೆರೆದಿರುವುದು ಅರಿವಿಗೆ ಬರುವುದು ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಪುನೀತ್ ಕೆರೆಹಳ್ಳಿಗೆ ಮಾತ್ರ, ಕಾಂಗ್ರೆಸ್ ಸರಕಾರ ಬಹಳ ಗೌರವ ಪೂರ್ವಕವಾಗಿ "ನಿಮ್ಮ ಮೇಲೆ ರೌಡಿ ಶೀಟ್ ತೆರೆಯಲು ಉದ್ದೇಶಿಸಿದ್ದೇವೆ, ತಮಗೆ ಈ ಕುರಿತು ಆಕ್ಷೇಪ ಇದ್ದರೆ ತಿಳಿಸಿ" ಎಂದು ನೋಟೀಸು ಕಳುಹಿಸಿದೆ. ಆ ಮಟ್ಟಿಗೆ ಪುನೀತ್ ಕೆರೆಹಳ್ಳಿ ಗೌರವಾನ್ವಿತ ಕ್ರಿಮಿನಲ್ ಎಂಬ ಪಟ್ಟಕ್ಕೆ ಭಾಜನರಾಗಿದ್ದಾನೆ. ಇದು ಅಚ್ಚರಿದಾಯಕ.
ಈ ಸರಕಾರಕ್ಕೆ ಪುನೀತ್ ಕೆರೆಹಳ್ಳಿಯಂತಹ ಅಪಾಯಕಾರಿ ಮತೀಯ ಕ್ರಿಮಿನಲ್ ನನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂಬ ಆಸಕ್ತಿ ಇದ್ದರೆ ಮೊದಲು ಮಾಡಬೇಕಿರುವುದು, ಇದ್ರಿಶ್ ಪಾಶ ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವುದು. ಇದ್ರಿಶ್ ಪಾಶಾ ನನ್ನು ಚಿತ್ರಹಿಂಸೆಗೆ ಒಳಪಡಿಸುವುದನ್ನು ವೀಡಿಯೋ ಮಾಡಿ ಹರಿಯಬಿಟ್ಟು, ಕೊಲೆ ಮಾಡಿದ ಪ್ರಕರಣದಲ್ಲಿ ಕೆರೆಹಳ್ಳಿಗೆ 45 ದಿನದಲ್ಲೇ ಆಘಾತಕಾರಿ ಎಂಬಂತೆ ಜಾಮೀನು ಮಂಜೂರು ಆಗಿದೆ. ಇದಕ್ಕೆ ರಾಮನಗರ ಎಸ್ ಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಅಂದಿನ ಬಿಜೆಪಿ ಸರಕಾರದ ಸೂಚನೆಯಂತೆ ದುರ್ಬಲ FIR ದಾಖಲಿಸಿದ್ದು, ಕೊಲೆಗಾರನ ರಕ್ಷಣೆಗಾಗಿಯೇ ಎಂಬಂತೆ ತನಿಖೆ ನಡೆಸಿದ್ದು ಕಾರಣ ಅಲ್ಲದೆ ಮತ್ತೇನಲ್ಲ.
ಕಾಂಗ್ರೆಸ್ ಸರಕಾರ ಈ ಪ್ರಕರಣವನ್ನು ಮರು ತನಿಖೆ ಮಾಡಿಸಿ ಅಪಾಯಕಾರಿ ಕೆರೆಹಳ್ಳಿ ಗ್ಯಾಂಗ್ ಅನ್ನು ಶಿಕ್ಷೆಗೊಳಪಡಿಸುವ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲಿಗೆ "ತಮ್ಮ ಮೇಲೆ ರೌಡಿ ಶೀಟ್ ದಾಖಲಿಸುವ ಕುರಿತು ತಮಗೆ ಏನಾದರೂ ಆಕ್ಷೇಪ ಇದೆಯೆ ?" ಎಂದು ಪುನೀತ್ ಗೆ ನೋಟೀಸು ಕಳುಹಿಸಿ, ಅದನ್ನೇ ದೊಡ್ಡ ಸಾಧನೆ ಎಂಬಂತೆ ಹಾಸ್ಯಾಸ್ಪದ ನಡೆ ಕೈಗೊಂಡಿದೆ. ಬಹುಷ, ಇದ್ರೀಶ್ ಪಾಷಾ ಕೊಲೆ ಪ್ರಕರಣವನ್ನು ದುರ್ಬಲಗೊಳಿಸಿ, ಕೆರೆಹಳ್ಳಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರಕಾರದ ಪ್ರಭಾವಿಗಳಿಗೆ ಆಪ್ತರಿರಬಹುದು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.