ಪಡುಕೋಣೆ: ಕನ್ನಡ ಶಿಕ್ಷಕರ ವರ್ಗಾವಣೆಗೆ ಪೋಷಕರಿಂದ ಪ್ರತಿಭಟನೆ

Update: 2023-06-23 15:18 GMT

ಕುಂದಾಪುರ, ಜೂ.23: ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಯನ್ನು ಅವೈಜ್ಞಾನಿಕವಾಗಿ ಮಾಡಿದ್ದಲ್ಲದೆ, ಕನ್ನಡ ಶಾಲೆಯಿಂದ ಕನ್ನಡ ಶಿಕ್ಷಕರನ್ನು ವರ್ಗಾಯಿಸಿರುವುದನ್ನು ಖಂಡಿಸಿ ಪಡುಕೋಣೆ (ಕೋಟೆಗುಡ್ಡೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೆಪದಲ್ಲಿ ಇಲ್ಲಿದ್ದ ಕನ್ನಡ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇದರಿಂದ ಕನ್ನಡ ಶಾಲೆಯಲ್ಲಿ ಕನ್ನಡ ಶಿಕ್ಷಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ ಶಿಕ್ಷಣ ಇಲಾಖೆಯು ಕನ್ನಡ ಶಾಲೆಗಳಿಗೆ ಎಷ್ಟು ಮಹತ್ವ ಕೊಡುತ್ತಿದೆ ಎನ್ನುವುದು ಅರ್ಥವಾಗುತ್ತದೆ ಎಂದರು.

ಶಾಲೆಯಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿಯಾಗಿ ಅನೇಕ ವರ್ಷಗಳು ಕಳೆದಿವೆ. ಈಗ 59 ಮಕ್ಕಳು ಮಾತ್ರ ಇರುವುದರಿಂದ ಭರ್ತಿ ಮಾಡಲು ಕೊರತೆಯೂ ಇದೆ. ಈ ವರ್ಗಾವಣೆ ಆದೇಶವನ್ನು ಕೂಡಲೇ ರದ್ದುಗೊಳಿ ಸಬೇಕು ಎಂದವರು ಒತ್ತಾಯಿಸಿದರು.

ಸಾಮೂಹಿಕ ರಾಜೀನಾಮೆ: ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈಗ ಇಲಾಖೆ ಕೈಗೊಂಡಿರುವ ವರ್ಗಾವಣೆ ಆದೇಶವನ್ನು ರದ್ದು ಗೊಳಿಸಬೇಕು. ಇಲ್ಲದಿದ್ದರೆ ಎಸ್‌ಡಿಎಂಸಿ ಸದಸ್ಯರೆಲ್ಲ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಜ್ಯೋತಿ ಎಚ್ಚರಿಸಿದರು.

ಮಕ್ಕಳು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ನಮಗೆ ಹಿಂದೆ ಇದ್ದ ಕನ್ನಡ ಶಿಕ್ಷಕಿಯನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಘೋಷಣೆ ಕೂಗಿ, ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.

ಪ್ರತಿಭಟನೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಶ್ವನಾಥ ಪಡುಕೋಣೆ, ಕಾರ್ಯದರ್ಶಿ ಕಿರಣ್ ಗಾಣಿಗ, ಸದಸ್ಯರು, ಪೋಷಕರು, ಊರವರು ಉಪಸ್ಥಿತರಿದ್ದರು.

ಬೇಡಿಕೆಗಳೇನು?:

*2021-22ನೇ ಸಾಲಿನ ಅವೈಜ್ಞಾನಿಕ ಹೆಚ್ಚುವರಿ ಪಟ್ಟಿಯನ್ನು ಇಲಾಖೆಯು ಕೂಡಲೇ ರದ್ದುಗೊಳಿಸಬೇಕು. ರಾಜ್ಯದ ಯಾವುದೇ ಶಾಲೆಯ ಹೆಚ್ಚುವರಿ ಪಟ್ಟಿ ಮಾಡುವುದಾದಲ್ಲಿ ಪ್ರಸಕ್ತ ಸಾಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಪಟ್ಟಿ ಮಾಡಬೇಕು.

*ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೀಡುವ ಬದಲು ತರಗತಿಗಳನ್ನು ಪರಿಗಣಿಸಿ, ಶಿಕ್ಷಕರನ್ನು ನೀಡಬೇಕು.

*ಒಂದು ಹುದ್ದೆ ಭರ್ತಿಯಾಗದೇ, ಮತ್ತೊಂದು ಹುದ್ದೆ ಹೆಚ್ಚುವರಿ ಮಾಡದಿರುವುದು.

* ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರನ್ನು ಇಟ್ಟು, 8ನೇ ತರಗತಿ ಪ್ರೌಢ ಶಿಕ್ಷಕರನ್ನು ಪ್ರೌಢಶಾಲೆಗೆ ವರ್ಗಾಯಿಸುವುದು.

* ಸರಕಾರಿ ಶಾಲೆಯ ವಾಹನಗಳು ಇನ್ನೊಂದು ಸರಕಾರಿ ಶಾಲಾ ವ್ಯಾಪ್ತಿಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಇದರಿಂದ ಇನ್ನುಳಿದ ಸರಕಾರಿ ಶಾಲೆಗಳಿಗೆ ಅನ್ಯಾಯ ಮಾಡಿದಂತೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News