ಶುಲ್ಕ ಪಾವತಿ ಬಾಕಿ: ಮನಪಾಕ್ಕೆ ಆ್ಯಂಟನಿ ಸಂಸ್ಥೆಯಿಂದ ನೋಟೀಸ್!

Update: 2023-06-29 14:49 GMT

ಮಂಗಳೂರು, ಜೂ. 29: ಮಹಾನಗರ ಪಾಲಿಕೆ ಆಡಳಿತವು ಉದ್ದೇಶ ಪೂರ್ವಕವಾಗಿ 68.85 ಕೋಟಿ ರೂ.ಗಳ ಶುಲ್ಕವನ್ನು ಬಾಕಿ ಇರಿಸಿರುವುದಾಗಿ ಆ್ಯಂಟನಿ ವೇಸ್ಟ್ ಹ್ಯಾಂಡಲಿಂಗ್ ಸಂಸ್ಥೆಯು ಪಾಲಿಕೆಗೆ ಲೀಗಲ್ ನೋಟೀಸು ನೀಡಿರುವ ಘಟನೆ ನಡೆದಿದೆ.

ಮಂಗಳೂರು ಮಹಾನಗರಪಾಲಿಕೆಯು ಉದ್ದೇಪೂರ್ವಕವಾಗಿ ಸುಮಾರು ದೊಡ್ಡ ಶುಲ್ಕದ ಮೊತ್ತವನ್ನು ಪಾವತಿಸದೆ ಬಾಕಿ ಇರಿಸಿಕೊಂಡಿದೆ. ತಮ್ಮನ್ನು ಬೇಕಾದ ಷರತ್ತುಗಳಿಗೆ ಒಪ್ಪಿಕೊಳ್ಳುವಂತೆ ಮಣಿಸುವುದಕ್ಕೆ ಹೂಡಿದ ತಂತ್ರ ಇದಾಗಿದೆ ಎಂದು ಆಂಟನಿ ಸಂಸ್ಥೆಯ ವಕೀಲರಾದ ವಿವೇಕಾನಂದ ಪನೆಯಾಲ ಅವರ ಮೂಲಕ ಪಾಲಿಕೆಗೆ ನೀಡಲಾದ ನೋಟೀಸಿನಲ್ಲಿ ತಿಳಿಸಲಾಗಿದೆ.

ನೋಟೀಸ್ ಸಿಕ್ಕಿದ ದಿನದಿಂದ ಏಳು ದಿನದೊಳಗೆ ಹಣ ಪಾವತಿಸಬೇಕು. ಬಾಕಿ ಇರಿಸಲಾದ ದಿನದಿಂದ ಬಾಕಿ ಮೊತ್ತಕ್ಕೆ ಶೇ.18ರಷ್ಟು ಬಡ್ಡಿ ಸೇರಿಸಿ ಪೂರ್ಣ ಪಾವತಿ ಮಾಡುವುದಲ್ಲದೆ ಆಗಸ್ಟ್ 1ರಿಂದ ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಸ ಸಂಗ್ರಹ ಮಾಡುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆ್ಯಂಟನಿ ಸಂಸ್ಥೆಗೆ 6 ತಿಂಗಳ ಅವಧಿ ವಿಸ್ತರಣೆ!

ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ಕಸಸಂಗ್ರಹಣೆ ವ್ಯವಸ್ಥೆಯನ್ನು ಗುತ್ತಿಗೆಯಾಧಾರದಲ್ಲಿ ನಿರ್ವಹಿಸುತ್ತಿರುವ ಮೆಸರ್ಸ್ ಆ್ಯಂಟನಿ ವೇಸ್ಟ್ ಹ್ಯಾಂಡಲಿಂಗ್ ಸೆಲ್ ಪ್ರೈ. ಲಿ.ನ ಗುತ್ತಿಗೆ ಅವಧಿ 2023ರ ಜುಲೈ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಪರ್ಯಾಯ ವ್ಯವಸ್ಥೆಗೆ ಟೆಂಡರ್ ಕರೆಯಲು ತಡವಾಗಿರುವ ಕಾರಣ, ಆ್ಯಂಟನಿ ಸಂಸ್ಥೆಗೆ ಗುತ್ತಿಗೆ ಅವಧಿಯನ್ನು ಆಗಸ್ಟ್ 1ರಿಂದ ಮತ್ತೆ ಆರು ತಿಂಗಳ ಅವಧಿಗೆ (2024ರ ಜನವರಿ 31ರವರೆಗೆ) ಅಥವಾ ಪಾಲಿಕೆಯು ಘನತ್ಯಾಜ್ಯ ನಿರ್ವಹಣೆಗೆ ಅಗತ್ಯವಿರುವ ವಾಹನ ಯಂತ್ರೋಪಕರಣಗಳ ಖರೀದಿ ಪ್ರಕ್ರಿಯೆ ಮತ್ತು ಕಸ ಸಂಗ್ರಹಣೆ ಮತ್ತು ಸಾಗಾಟ ಕಾರ್ಯದ ಕಾರ್ಯಚರಣೆ ಹಾಗೂ ನಿರ್ವಹಣೆಯ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುವವರೆಗೆ ಮುಂದುವರಿಸಲು ಮಂಜೂರಾತಿಯನ್ನು ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News