ವೇತನ ಹೆಚ್ಚಳದ ಪ್ರಣಾಳಿಕೆ ಘೋಷಣೆಯನ್ನು ಜಾರಿಗೊಳಿಸಿ: ಅಕ್ಷರ ದಾಸೋಹ ನೌಕರರಿಂದ ಮನವಿ
ಉಡುಪಿ, ಜೂ.23: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನವನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಅವರ ಮೂಲಕ ಶುಕ್ರವಾರ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಕುರಿತು ಸಮಿತಿ ಮನವಿ ಅರ್ಪಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಹಿಂದಿನ ಬಿಜೆಪಿ ಸರಕಾರ ಬಜೆಟ್‌ನಲ್ಲಿ ಅಕ್ಷರ ದಾಸೋಹದ ನೌಕರರಿಗೆ 1000ರೂ. ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಇದುವರೆಗೆ ಗೌರವಧನ ಬಿಡುಗಡೆಯಾಗಿಲ್ಲ. ಈ ಬಗ್ಗೆ ತಮ್ಮ ಸರಕಾರ ತಕ್ಷಣ 1000ರೂ. ಬಿಡುಗಡೆ ಆದೇಶ ಮಾಡಿ ಅದನ್ನು ಖಾತೆಗೆ ಜಮಾ ಮಾಡುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮುಖ್ಯಮಂತ್ರಿಗಳು ಜುಲೈ ತಿಂಗಳಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವ ನೌಕರರು ವಿಧವೆ ಯರು, ಆದಾಯ ಕಡಿಮೆ ಇರುವವರು ಇಲ್ಲವೇ ಕೂಲಿಕಾರ ಕುಟುಂಬದ ವರಾಗಿದ್ದಾರೆ. ಬಹುತೇಕರಿಗೆ ಕುಟುಂಬ ನಡೆಸುವುದೇ ಕಷ್ಟಕರ ಎಂಬ ಪರಿಸ್ಥಿತಿ ಇದೆ ಎಂದು ವಿವರಿಸಲಾಗಿದೆ.
ಆದ್ದರಿಂದ ತಾವು ಇಲಾಖೆಯಲ್ಲಿ ಯಾವುದೇ ಭದ್ರತೆ ಇಲ್ಲದೇ ಕೆಲಸ ಮಾಡುತ್ತಿರುವ ನೌಕರರಿಗೆ ಬಜೆಟ್‌ನಲ್ಲಿ ವೇತನ ಹೆಚ್ಚಳ ಹಾಗೂ ಈ ಹಿಂದೆ ಬಾಕಿ ಇರುವ ವೇತನವನ್ನು ಖಾತೆಗೆ ಜಮಾ ಮಾಡಲು ಆದೇಶ ನೀಡಬೇಕೆಂದು ನೌಕರರು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಬಿಸಿಯೂಟ ನೌಕರರ ಬೇಡಿಕೆ: 60ವರ್ಷ ದಾಟಿದ ನೌಕರರನ್ನು ಕೆಲಸದಿಂದ ತೆಗೆಯುವ ಕ್ರಮ ನಿಲ್ಲಿಸಬೇಕು. ಅಥವಾ ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ನೌಕರರಿಗೆ ಇಡಿಗಂಟು ಜಾರಿಗೊಳಿಸಬೇಕು. ಆಯಾ ತಿಂಗಳಿಗೆ ಸರಿಯಾಗಿ ನಿರ್ದಿಷ್ಟ ದಿನದಂದು ವಿಳಂಬ ಮಾಡದೇ ಖಾತೆಗೆ ವೇತನ ಜಮೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಪಂ ಸಿಇಓ ಅವರಿಗೆ ಮನವಿ ಅರ್ಪಿಸಿದ ನಿಯೋಗದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಸಿಂಗಾರಿ ನಾವುಂದ, ಪ್ರಧಾನ ಕಾರ್ಯದರ್ಶಿ ಸುನಂದಾ ಮುಂತಾದವರಿದ್ದರು.