ಪಂಚನಬೆಟ್ಟು ಪ್ರೌಢಶಾಲೆ ಮುಚ್ಚಲು ಹುನ್ನಾರ: ವಿದ್ಯಾವರ್ಧಕ ಸಂಘ ಆರೋಪ
ಉಡುಪಿ, ಜು.11: ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ವತಿಯಿಂದ 33 ವರ್ಷಗಳಿಂದ ಕುಗ್ರಾಮದಲ್ಲಿ ಗುಣಮಟ್ಟದ ಉಚಿತ ಶಿಕ್ಷಣ ನೀಡುತ್ತಿರುವ ಪಂಚನಬೆಟ್ಟು ಪ್ರೌಢಶಾಲೆಯನ್ನು ಮುಚ್ಚಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ.ನರಸಿಂಹ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ಮಾನ್ಯತೆ ರದ್ದು ಮಾಡಿ ಶಾಲೆ ಮುಚ್ಚುವ ಆದೇಶ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಶಿಕ್ಷಣ ಇಲಾಖೆಯು ಈ ಶಾಲೆ ಮುಚ್ಚು ಉದ್ದೇಶದಿಂದ ಕಿರುಕುಳ ನೀಡುತ್ತಿದೆ. 2 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿದ್ದು, ಯಾವ ಮಕ್ಕಳಿಂದಲೂ ಹಣ ವಸೂಲಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕುತಂತ್ರಕ್ಕೆ ಕನ್ನಡ ಶಾಲೆ ಹೀನಾಯ ಸ್ಥಿತಿಗೆ ತಲುಪುತ್ತಿದೆ. ಶಾಲೆಯನ್ನು ಮುಚ್ಚಲು ಆದೇಶಗಳನ್ನು ಹೊರಡಿಸಿ ಶಾಲೆಯ ಮುಖ್ಯ ಶಿಕ್ಷಕರಿಂದ ಎಸ್‌ಆರ್ (ಶಾಲಾ ಶಿಕ್ಷಕರ ಕಾರ್ಯವಾಹಿ)ದಾಖಲೆಗಳನ್ನು ಈ ಹಿಂದಿನ ಬಿಇಒ ಕಳವು ಮಾಡಿಸಿದ್ದಾರೆ. ಈ ಬಗ್ಗೆ ಮುಖ್ಯ ಶಿಕ್ಷಕರೇ ನಮಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಒಂದು ಕನ್ನಡ ಮಾಧ್ಯಮ ಶಾಲೆ ಮುಚ್ಚಲು ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಓರ್ವ ಶಾಲಾ ಮುಖ್ಯ ಶಿಕ್ಷಕ ಅಪರಾಧ ಎಸಗಿದ್ದಾರೆ. ಶಾಲೆಯಿಂದ ಇನ್ನಷ್ಟು ದಾಖಲೆಪತ್ರಗಳು ಮತ್ತು ಸಮಯ, ಸಂಬಳ, ಸಾಮಾಗ್ರಿಗಳ ಕಳವು ಮಾಡಲಾಗಿದೆ ಎಂದು ದೂರಿದರು.
ಇದನ್ನು ವಿರೋಧಿಸಿ ಇಲಾಖೆ ಮತ್ತು ಮುಖ್ಯ ಶಿಕ್ಷಕರ ವಿರುದ್ಧ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಲಾಗಿದೆ. ನ್ಯಾಯಾಲಯ ಆದೇಶದಂತೆ ಶಿಕ್ಷಣ ಇಲಾಖೆ ಶಾಲೆಗೆ ಸಹಕಾರ ನೀಡಬೇಕು ಎಂದ ಅವರು, ಈ ಶಾಲೆಯಿಂದ ಮೂವರು ಅನುದಾನಿತ ಶಿಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾ ಗಿದೆ. 35 ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂಘದಿಂದ 4 ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಅಶೋಕ್, ಸದಸ್ಯ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.