ಶೀಘ್ರದಲ್ಲೇ ರಾಜಕೀಯ ತರಬೇತಿ ಸಂಸ್ಥೆ ಆರಂಭ: ಸ್ಪೀಕರ್ ಯು.ಟಿ.ಖಾದರ್

Update: 2023-06-29 11:59 GMT

ಮಂಗಳೂರು, ಜೂ.29: ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಾಗುವಂತೆ ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವ ಆಲೋಚನೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಸದ್ಯ ಪುಣೆಯಲ್ಲಿ ಇಂತಹ ಸಂಸ್ಥೆ ಇದ್ದು, ಅವರ ಜತೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಪ್ರಮುಖ ಕೇಂದ್ರದಲ್ಲೇ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಇದಕ್ಕೆ ಪಠ್ಯಕ್ರಮ, ಫುಲ್ ಟೈಮ್ ಉಪನ್ಯಾಸಕರು ಇರಲಿದ್ದಾರೆ.

ಅದಲ್ಲದೆ, ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ತರಬೇತಿ ನೀಡುವರು. ಇದರಿಂದ ಪದವೀಧರರು ಒಳ್ಳೆಯ ನಾಯಕ ಆಗಬಹುದು. ಅದರ ಜೊತೆಗೆ ಶಾಸಕರ ಬಳಿಯೂ ಕೆಲಸ ಮಾಡಬಹುದು ಎಂದು ಅವರು ಹೇಳಿದರು.

ಜುಲೈ 3ರಿಂದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಸಂದೇಶ ನೀಡಲಿದ್ದಾರೆ. ಜು. 7 ರಂದು ಸಿಎಂ ರಾಜ್ಯದ ಮುಂಗಡ ಪತ್ರ ಮಂಡಿಸುವರು. ಶಾಸಕರೆಲ್ಲರ ಭಾಗವಹಿಸುವಿಕೆ ಅಧಿವೇಶನದಲ್ಲಿರಬೇಕು ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಈಶ್ವರ ಕುಲಾಲ್, ರಮೇಶ್ ಶೆಟ್ಟಿ, ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News