ಸಾರ್ವಜನಿಕ ಅರಿವಿನಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯ: ಡಾ.ಉಡುಪ

Update: 2023-07-01 14:34 GMT

ಉಡುಪಿ, ಜು.1: ಭಾರತ ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು, ಇನ್ನೂ ಬಡತನದ ಅಂಚಿನಲ್ಲಿ ಇರುವುದಕ್ಕೇ ಮೂಲ ಕಾರಣ ನಿರೀಕ್ಷೆಗೂ ಮೀರಿ ಹೆಚ್ಚುತ್ತಿರುವ ಜನಸಂಖ್ಯೆ. ಜನಸಂಖ್ಯಾ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಶ್ರೀಕೃಷ್ಣ ಸಭಾಂಗಣದಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯ ದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಕ್ಷಣದ ಕೊರತೆ, ಬಾಲ್ಯ ವಿವಾಹ, ಅಜ್ಞಾನ, ಮೂಢನಂಬಿಕೆ ಮುಂತಾದವು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿವೆ. ಜನಸಂಖ್ಯಾ ಸ್ಪೋಟದಿಂದ ಆಹಾರ, ನೀರು, ವಸತಿ, ಬಟ್ಟೆ, ನೆಲ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಕೊರತೆ, ಸಾಮಾಜಿಕ ಅಸಮಾನತೆ, ಅಪೌಷ್ಠಿಕತೆ, ನಗರವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳ ಉಲ್ಬಣ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತದೆ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳು ವುದರಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದರು.

ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಎರಡು ವಿಧಗಳಾಗಿ ವಿಂಗಡಿಸ ಲಾಗಿದ್ದು, ಜೂನ್ 27ರಿಂದ ಜುಲೈ 10ರವರೆಗೆ ಸಮುದಾಯದ ಜಾಗತೀಕರಣ ಪಾಕ್ಷಿಕ ಹಾಗೂ ಜುಲೈ 11ರಿಂದ ಜುಲೈ 24 ರವರೆಗೆ ಜನಸಂಖ್ಯಾ ಸ್ಥಿರೀಕರಣ ಪಾಕ್ಷಿಕ ಆಚರಿಸಲಾಗುವುದು. ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೊಷ ಮತ್ತು ಸಮೃಧ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂಬ ಪ್ರತಿಜ್ಞೆ ಮಾಡಿಕೊಳ್ಳುತ್ತೇವೆ ಎಂಬ ಘೊಷವಾಕ್ಯದೊಂದಿಗೆ ಪ್ರಸಕ್ತ ಸಾಲಿನ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ ರಾಮ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಚಿದಾನಂದ ಸಂಜು, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಮತ್ತು ಡಾ.ಶೋಭಾ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರು, ವೈದ್ಯಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಭಾರ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News