ಪತ್ರಕರ್ತ ಎನ್ನಲಾದ ಬಲಪಂಥೀಯ ವ್ಯಕ್ತಿಗೆ ಆಹ್ವಾನ ಹಿನ್ನೆಲೆ: ಮಂಗಳೂರು ವಿವಿ ಕಾಲೇಜಿನ ಕಾರ್ಯಕ್ರಮಗಳು ಮುಂದೂಡಿಕೆ

Update: 2023-06-22 17:47 GMT

ಮಂಗಳೂರು, ಜೂ.22: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜೂ.23 ಮತ್ತು 24ರಂದು ನಡೆಸಲು ಉದ್ದೇಶಿಸಲಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜೂ.23ರಂದು ನಡೆಯಬೇಕಿದ್ದ ಪ್ರತಿಭಾ ದಿನಾಚರಣೆ ಮತ್ತು ಜೂ.24ರಂದು ನಡೆಯಬೇಕಿದ್ದ ಕಾಲೇಜು ವಾರ್ಷಿಕೋತ್ಸವವನ್ನು ಮುಂದೂಡಲಾಗಿದೆ. ಈ ಎರಡೂ ದಿನ ಎಂದಿನಂತೆ ತರಗತಿ ನಡೆಯಲಿದೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರುವಂತೆ ಸೂಚಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿರುವ ಪತ್ರಕರ್ತ ಎನ್ನಲಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಂಬ ವ್ಯಕ್ತಿಯನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಎನ್‌ಎಸ್‌ಯುಐ ದ.ಕ.ಜಿಲ್ಲಾ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮಂಗಳೂರು ವಿವಿ ಕುಲಪತಿಗೆ ಮನವಿ ಸಲ್ಲಿಸಿ ಮತೀಯ ದ್ವೇಷ ಹರಡುವ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಂಬ ವ್ಯಕ್ತಿಯನ್ನು ಸರಕಾರಿ ಕಾಲೇಜಿನ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಆಹ್ವಾನಿಸಬಾರದು ಎಂದು ಒತ್ತಾಯಿಸಿತ್ತು. ಆದರೆ ಅದಕ್ಕೆ ಸೂಕ್ತ ರೀತಿಯ ಸ್ಪಂದನ ಸಿಕ್ಕಿಲ್ಲ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ‘ಶ್ರೀಕಾಂತ್ ಶೆಟ್ಟಿ ಮತೀಯ ದ್ವೇಷಿ ವ್ಯಕ್ತಿ. ಈತನನ್ನು ಅತಿಥಿಯಾಗಿ ಆಹ್ವಾನಿಸಿರುವುದು ಸರಿಯಲ್ಲ. ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಸೂಕ್ತ ರೀತಿಯಲ್ಲಿ ಸ್ಪಂದನ ಸಿಕ್ಕಿರಲಿಲ್ಲ. ಹಾಗಾಗಿ ದ.ಕ. ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆವು. ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪಾಲ್ಗೊಂಡರೆ ಮುತ್ತಿಗೆ ಹಾಕುವೆವು ಎಂದು ಎಚ್ಚರಿಸಿದ್ದೆವು. ನಮ್ಮ ಮನವಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸಿದ್ದಾರೆ. ಅದರ ಫಲವಾಗಿ ಇದೀಗ ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮ ಮುಂದೂಡಿರುವುದಾಗಿ ಪ್ರಕಟಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಮತೀಯ ವಿಷಬೀಜ ಬಿತ್ತುತ್ತಿರುವ ಬಗ್ಗೆ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಶೆಟ್ಟಿಯ ವಿರುದ್ಧ ಎನ್‌ಎಸ್‌ಯುಐ ಸಂಘಟಿತ ಹೋರಾಟ ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಶೆ ವ್ಯಕ್ತವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News