ಬಿಸಿರೋಡ್ - ಸುರತ್ಕಲ್ ಟೋಲ್‌ಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು: ಹೋರಾಟ ಸಮಿತಿ ಆಕ್ರೋಶ

Update: 2023-07-15 17:21 GMT

ಸುರತ್ಕಲ್: ಮಳೆಗಾಲದ ಮೊದಲ ತಿಂಗಳ ಮಳೆಗೆ ಬಿಸಿ ರೋಡ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಪೂರ್ತಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ಮರಣದ ಹೆದ್ದಾರಿಯಾಗಿ ಪರಿಣಮಿಸಿದೆ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಸಂಬಂಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆ ನೀಡಿದ್ದು, ಇದು ಹೆದ್ದಾರಿ ಪ್ರಾಧಿಕಾರ ಮತ್ತು ಸಂಸದರ ನಿರ್ಲಕ್ಷ್ಯತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಹೆದ್ದಾರಿಯ ಕೆಲವು ಗುಂಡಿಗಳಂತೂ ಅರ್ಧ ಅಡಿ ಆಳ, ಕೆಲವು ಮೀಟರ್ ಗಟ್ಟಲೆ ಅಗಲ. ಮಳೆ ಸುರಿಯುತ್ತಿರುವಾಗಲಂತೂ ರಸ್ತೆಯಲ್ಲಿ ನೀರು ತುಂಬಿ ಗುಂಡಿಗಳು ಗೋಚರಿಸುವುದೇ ಇಲ್ಲ. ಕೆಲವು ಗುಂಡಿಗಳು ದಿಢೀರಾಗಿ ಎದುರುಗೊಂಡು ವಾಹನ ಸವಾರರನ್ನು ಕಕ್ಕಾಬಿಕ್ಕಿಯಾಗಿಸುದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಂತೂ ಈ ಗುಂಡಿಗಳನ್ನು ಗಮನಿಸದಿದ್ದರೆ ಕೆಳಗೆ ಬೀಳಲೇಬೇಕು. ಕಾರು, ಟ್ರಕ್ಕುಗಳು ಗುಂಡಿಗೆ ಬಿದ್ದ ರಭಸಕ್ಕೆ ರಸ್ತೆಯಲ್ಲೆ ಕೆಟ್ಟು ನಿಲ್ಲುತ್ತಿವೆ. ಒಟ್ಟಾರೆ ಸುರತ್ಕಲ್ ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಈಗ ಮೃತ್ಯುವಿನೊಂದಿಗೆ ಸರಸದಂತಾಗಿದ್ದು, ಮರಣದ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಮಳೆಗಾಲ ಇನ್ನೂ ಮೂರು ತಿಂಗಳು ಬಾಕಿ ಇದ್ದು, ಆಗುವ ಅನಾಹುತಗಳು ಅಂದಾಜಿಗೆ ನಿಲುಕದು ಎಂದು ಹೇಳಿದ್ದಾರೆ.

ಒಟ್ಟು ಮೂವತ್ತೇಳು ಕಿ.ಮೀ. ಉದ್ದದ ಈ ರಾಷ್ಟ್ರೀಯ ಹೆದ್ದಾರಿಯ ಒಟ್ಟು ದುರವಸ್ಥೆ ಅಂದಾಜಿಗೆ ನಿಲುಕದು. ಇಷ್ಟು ಅನಾಹುತ, ಹೆದ್ದಾರಿಯಲ್ಲೇ ಮೃತ್ಯು ಕೂಪ ನಿರ್ಮಾಣಗೊಂಡಿದ್ದರೂ ಆಡಳಿತ ವಿರೋಧಿ ಅಲೆಯನ್ನೂ ಎದುರಿಸಿ ದೊಡ್ಡ ಅಂತರದಲ್ಲಿ ಗೆದ್ದ ಬಿಜೆಪಿ ಶಾಸಕರು ಸಣ್ಣ ಶಬ್ದವನ್ನೂ ಎತ್ತಿಲ್ಲ ಎಂದು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

"ಜಿಲ್ಲೆಯ ಶಾಸಕರು, ಸಂಸದರು ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳ ಕುರಿತು ಪ್ರಶ್ನಿಸಬೇಡಿ ಎಂದು ಹೇಳಿಯೇ ಚುನಾವಣೆ ಗೆದ್ದವರು. ಆದ್ದರಿಂದ ಅವರು ಹೆದ್ದಾರಿ ಮೃತ್ಯು ಗುಂಡಿಗಳ ಕುರಿತು ಮಾತಾಡುವುದಿಲ್ಲ. ಅದೇನಿದ್ದರೂ ಜನಪರ ಸಂಘಟನೆಗಳ ಕೆಲಸದಂತಾಗಿದೆ. ಈಗ ಮತ್ತೆ ಹೋರಾಟಕ್ಕಿಳಿಯುವುದೇ ನಮ್ಮ ಮುಂದಿರುವ ದಾರಿ".

- ಮುನೀರ್ ಕಾಟಿಪಳ್ಳ, ಸಂಚಾಲಕರು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ












Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News