ಕೋಸ್ಮಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ
ಭಟ್ಕಳ: ಇಲ್ಲಿನ ಖಲಿಫಾ ಮೋಹಲ್ಲಾದ ಕೋಸ್ಮಸ್ ಸ್ಪೋರ್ಟ್ಸ್ ಸೆಂಟರ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ಯುವಕರಿಗೆ ಹಾಗೂ 10, 12 ಮತ್ತು ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ ಮರ್ಕಝಿ ಖಲಿಫಾ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ರಾತ್ರಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಡಾ.ವೀರೇಂದ್ರ ಶಾನುಭಾಗ ಮಾತನಾಡಿ, ಖಲಿಫಾ ಮೋಹಲ್ಲಾದ 32 ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಸಂಪೂರ್ಣ ಕುರ್‌ಆನ್ ಕಂಠಪಾಟಗೊಳಿಸಿದ್ದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾ ಯಿತು. ವಿದ್ಯಾರ್ಥಿಗಳಲ್ಲಿ ಅಸಾಧಾರಣ ಸ್ಮರಣ ಶಕ್ತಿ ಇದೆ ಎಂದ ಅವರು, ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಗಣನೀಯ ಯಶಸ್ಸು ದಾಖಲಿಸಿದ್ದು, ಇಲ್ಲಿನ ಜನರು ಕ್ರೀಡೆಯಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ, ಅವರೆಲ್ಲರಿಗೂ ಶ್ರಮ, ಸಮರ್ಪಣಾ ಮನೋಭಾವ, ಕುತೂಹಲ ಇಲ್ಲಿಯ ಯುವಕರಲ್ಲಿದೆ. ನಿಮ್ಮೊಳಗೆ ತುಂಬಾ ಪ್ರತಿಭೆ ಇದೆ, ನೀವು ಹೊಸ ಆಲೋಚನೆಗಳ ಬಗ್ಗೆ ಯೋಚಿಸಬೇಕು, ನೀವು ಹೊಸ ವ್ಯವಹಾರದತ್ತ ಪ್ರಗತಿ ಸಾಧಿಸಬೇಕು, ದುಬೈ ಮತ್ತು ಇತರ ದೇಶಗಳಿಗೆ ಹೋಗುವುದಕ್ಕಿಂತ, ಇಲ್ಲಿಯೇ ಏನಾದರೂ ಹೊಸತನ ಸೃಷ್ಟಿಸಿ ಹೊರಗಿನವರೇ ಭಟ್ಕಳಕ್ಕೆ ಬರು ವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಓಲಾ, ಊಬರ್, ಸ್ವಿಗಿ, ಝೊಮಾಟೊ ಉದಾಹರಣೆಗಳನ್ನು ನೀಡಿದ ಅವರು ಭಟ್ಕಳದ ಜನತೆಗೆ ಹೊಸದನ್ನು ಆಲೋಚಿಸಿ, ಹೊಸ ಕ್ಷೇತ್ರಗಳನ್ನು ಸೃಷ್ಟಿಸಿ, ಯುವಕರು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅವರಿಗೆ ಯಾವುದೇ ಕೆಲಸವು ಕಷ್ಟಕರವಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮಕ್ಬೂಲ್ ಆಹ್ಮದ್ ಕೋಬಟ್ಟೆ, ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿಯುದ್ದೀನ್ ಅಕ್ರಮಿ ಮದನಿ ನದ್ವಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಮಾತನಾಡಿದರು. ಕೋಸ್ಮಸ್ ಸ್ಪೋರ್ಟ್ಸ್ ಸೆಂಟರ್ ಅಧ್ಯಕ್ಷ ಮೌಲಾನ ಇರ್ಷಾದ್ ನಾಯ್ತೆ ನದ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೌಲಾನ ತೈಮೂರ್ ಗವಾಯಿ ಅತಿಥಿಗಳನ್ನು ಸ್ವಾಗತಿ ಪರಿಚಯಿಸಿದರು. ಕೋಸ್ಮಸ್ ಸ್ಟೋರ್ಟ್ಸ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಂಜುನ್ ಗಂಗಾವಳಿ ನದ್ವಿ ವರದಿ ವಾಚಿಸಿದರು. ಅಬ್ದುಸ್ಸಲಾಂ ಚಾಮುಂಡಿ ಧನ್ಯವಾದ ಅರ್ಪಿಸಿದರು. ಹಾಫಿಝ್ ಹಸನ್ ಡಿ.ಎಫ್. ನಿರೂಪಿಸಿದರು.
ಮೊಹ್ತ್ಶಮ್ ಅಬು ಫೈಸಲ್, ಸಿದ್ದೀಕ್ ಇರ್ಷಾದ್ ಮೊಹಿಯುದ್ದೀನ್, ಕೆ ಎಂ ಅಶ್ಫಾಕ್, ತಾರೀಕ್ ದಮ್ದಾಬು, ಇಸ್ಮಾಯಿಲ್ ಜುಬಾಪು ಮತ್ತಿತರರು ವೇದಿಕೆಯಲ್ಲಿದ್ದರು.