ಮಾದಕ ದ್ರವ್ಯ ಬಳಕೆ ತಡೆ: ಶಿಕ್ಷಣ ಸಂಸ್ಥೆಗಳ ಜೊತೆ ವಿಶೇಷ ಕಾರ್ಯಾಚರಣೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ

Update: 2023-06-23 16:58 GMT

ಮಂಗಳೂರು: ಮಾದಕ ದ್ರವ್ಯ ಬಳಕೆ ತಡೆಯಲು ಪೊಲೀಸ್ ಇಲಾಖೆಯು ಜಿಲ್ಲಾಡಳಿತ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಣ್ಯ ಕ್ರಮಕೈಗೊಳ್ಳಲು ಸೂಚಿಸಿರುವುದಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಅಧೀಕ್ಷಕರ ಜೊತೆ ಶುಕ್ರವಾರ ಸಭೆ ನಡೆಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು.

ಸರಕಾರದ ಈ ಕ್ರಮಕ್ಕೆ ಮಕ್ಕಳ ಪೋಷಕರು ಸಹಕಾರ ನೀಡಬೇಕು. ಈ ಜಾಲದ ಹಿಂದೆ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿ ಕೈಜೋಡಿಸಿರುವುದು ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಸಿಬ್ಬಂದಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸೇರಿ ವಿಶೇಷ ಕಾರ್ಯಾಚರಣೆ ನಡೆಸಿ ಈ ಹಾವಳಿಯನ್ನು ನಿಗ್ರಹಿಸಲು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಗೂಂಡಾಗಿರಿ ಹಾವಳಿಯನ್ನು ನಿಗ್ರಹಿಸಲು ಕಠಿಣ ಕ್ರಮಕ್ಕೆ ಪೊಲೀಸ್‌ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಅನೈತಿಕ ಪೊಲೀಸ್ ಗಿರಿಯನ್ನು ಹತ್ತಿಕ್ಕಲು ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚಿಸಿದ್ದು ಯಾವುದೇ ಶಕ್ತಿ ಕಾನೂನು ಕೈಗೆತ್ತಿಕೊಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ಜಿಲ್ಲೆಯು ಮತ್ತಷ್ಟು ಅಭಿವೃದ್ಧಿ ಹೊಂದಲು ವಿಫುಲ ಅವಕಾಶಗಳನ್ನು ಜಿಲ್ಲೆಯ ಕಾನೂನೂ ಸುವ್ಯವಸ್ಥೆಯು ಇದಕ್ಕೊಂದು ಸವಾಲಾಗಿದ್ದು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಸಾಮರಸ್ಯ ಕಾಪಾಡಲು ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿ ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸಲು ಸೂಚಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News