ಭ್ರಷ್ಟಾಚಾರ ಆರೋಪ: ಉಡುಪಿ ಎಪಿಎಂಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಉಡುಪಿ, ಜೂ.28: ಉಡುಪಿ ಎಂಪಿಎಂಸಿಯ ಬೆಳೆಬಾಳುವ ಜಾಗವನ್ನು ಕಡಿಮೆ ಬೆಲೆಗೆ ಲೀಸ್ ಕಮ್ ಸೇಲ್ ಮೂಲಕ ಮಾರಾಟ ಮಾಡಲು ಮುಂದಾ ಗಿರುವ ಅಧಿಕಾರಿಗಳ ವಿರುದ್ಧ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬುಧವಾರ ಆದಿಉಡುಪಿಯ ಎಪಿಎಂಸಿ ವಠಾರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಗರಸಭೆ ಸದಸ್ಯ ವಿಜಯ ಕೊಡವೂರು, ಅಧಿಕಾರಿಗಳು ಎಪಿಎಂಸಿಯ ಜಾಗವನ್ನು ಲೀಸ್ ಕಮ್ ಸೇಲ್ ಅಡಿಯಲ್ಲಿ ಅತೀ ಕಡಿಮೆ ದರದಲ್ಲಿ ಲಂಚ ಪಡೆದು ಮಾರಾಟ ಮಾಡುತ್ತಿದ್ದಾರೆ. 4.69ಕೋಟಿ ಮೌಲ್ಯದ ಜಾಗವನ್ನು ಕೇವಲ 88.32ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸರಕಾರಕ್ಕೆ 3.81ಕೋಟಿ ರೂ. ನಷ್ಟವಾಗಿದೆ. ಈ ರೀತಿಯ ನಷ್ಟ ಮಾಡಿದ ಭ್ರಷ್ಟ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ ಎಪಿಎಂಸಿ ಆವರಣ ಶುಚಿಗೊಳಿಸಲು ಪ್ರತಿ ತಿಂಗಳು 1.5ಲಕ್ಷ ರೂ. ಹಣವನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಆವರಣ ನೋಡುವಾಗ ಕೊಳತು ತುಂಬಿರುವುದು ಕಂಡುಬರುತ್ತದೆ. ಶೌಚಾಲಾಯ ವ್ಯವಸ್ಥೆ ಕೂಡ ಸರಿ ಇಲ್ಲ. ಈ ರೀತಿ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳು ಉಗ್ರಗಾಮಿಗಳಿಗೆ ಸಮಾನರು ಎಂದು ಅವರು ಆರೋಪಿಸಿದರು.
ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಎಪಿಎಂಸಿಯಲ್ಲಿನ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದಿವೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇಲಾಖಾಧಿಕಾರಿಗಳಿಂದ ದಾಖಲೆ ತರಿಸಿ ಪರಿಶೀಲನೆ ನಡೆಸಲಾಗು ವುದು. ಒಂದು ವೇಳೆ ಇದರಲ್ಲಿ ತಪ್ಪಾಗಿರುವುದು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಉಡುಪಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್ ಕುಮಾರ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಸದಸ್ಯ ರಾಘವೇಂದ್ರ ಉಪ್ಪೂರು, ಕೊಡವೂರು ದೇವಸ್ಥಾನದ ಮಾಜಿ ಮೊಕ್ತೇಸರ ರಾಘವೇಂದ್ರ ರಾವ್, ಎಂಪಿಎಂಸಿ ಮಾಜಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಭಟ್, ಮಾಜಿ ಸದಸ್ಯರಾದ ರಮಾಕಾಂತ್ ಕಾಮತ್, ರಾಘವೇಂದ್ರ, ಆಶಾ, ವಿವಿಧ ಸಂಘಟನೆ ಗಳ ಮುಖಂಡರಾದ ಚಿನ್ಮಯ ಮೂರ್ತಿ, ಅಜಿತ್ ಕುಮಾರ್, ಸುಜಯ್ ಪೂಜಾರಿ, ಸಿದ್ಧಬಸಯ್ಯ ಸ್ವಾಮಿ, ಪ್ರಭಾಕರ ಪೂಜಾರಿ, ಮಂಜು ನಾಥ್ ಶೆಟ್ಟಿಗಾರ್, ಟಿ.ಜಿ.ಹೆಗ್ಡೆ, ವರ್ತಕರಾದ ಫಯಾಜ್ ಅಹ್ಮದ್, ಪ್ರಭು ಗೌಡ, ಜಗದೀಶ್ ಬಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು.