ಬಜ್ಪೆ| ದಲಿತ ಯುವತಿಗೆ ಜಾತಿ ನಿಂದನೆ ಆರೋಪ: ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪೊಲೀಸ್ ಠಾಣೆಯೆದುರು ಧರಣಿ

Update: 2023-07-10 17:57 GMT

ಬಜ್ಪೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಪಂಚಾಯತ್ ಸದಸ್ಯರೊಬ್ಬರು ದಲಿತ ಯುವತಿಗೆ ಜಾತಿ ನಿಂದನೆಗೈದು ಅಸಭ್ಯವಾಗಿ ಮಾತನಾಡಿದ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸದೇ ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದಲಿತರು ಭಿಮ್ ಸೇನೆಯ ಮುಂದಾಳತ್ವದಲ್ಲಿ ಠಾಣೆಯ ಮುಂಭಾಗ ಪ್ರತಿಭಟನೆ ಆರಂಭಿಸಿದ್ದಾರೆ.

ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತ ಕಾಲನಿಯಲ್ಲಿ ನೀರಿನ ಸಮಸ್ಯೆ ಇರುವ ಕುರಿತು ಯುವತಿ ವಾರ್ಡ್ ನ ಸದಸ್ಯೆ ಸವಿತಾ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ ಸವಿತಾ ಅವರು ಯುವತಿ ಕರೆ ಮಾಡಿದ್ದ ಮೊಬೈಲ್ ಸಂಖ್ಯೆಯನ್ನು ಸುದರ್ಶನ್ ಎಂಬಾತನಿಗೆ ನೀಡಿದ್ದು ಆತ ಕರೆ‌ಮಾಡಿ ಸಂತ್ರಸ್ತೆ ಜೊತೆ ಅಸಭ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಸಂತ್ರಸ್ತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು‌. ಆದರೆ ಪೊಲೀಸರು ಪ್ರಕರಣ‌ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿಯ ಸಹೋದರ ಚರಣ್ ಆರೋಪಿಸಿದ್ದಾರೆ.

ದೂರು ನೀಡದ ಬಳಿಕ ಆರೋಪಿ ಸುದರ್ಶನ್ ನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಆತನನ್ನು ವಿಚಾರಣೆಗೊಳಡಿಸುವ ಬದಲು ರಾಜ ಮರ್ಯಾದೆಯೊಂದಿಗೆ ರಕ್ಷಣೆ ನೀಡಿ ಪೊಲೀಸ್ ಠಾಣೆಯಿಂದ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಂತ್ರಸ್ತ ಯುವತಿ‌ಯ ಸಹೋದರ ದಲಿತ ಸಂಘಟನೆಗಳಿಗೆ ದೂರು ನೀಡಿದ್ದು, ಸದ್ಯ ದಲಿತ ಸಂಘಟನೆಗಳು ಭೀಮ್ ಸೇನೆಯ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಮುಂದೆ ಧರಣಿ ಆರಂಭಿಸಿವೆ ಎಂದು ತಿಳಿದು ಬಂದಿದೆ.

ದಲಿತ ಸಮುದಾಯದ ಯುವತಿಗೆ ವ್ಯಕ್ತಿಯೊಬ್ಬ ಜಾತಿ ನಿಂದನೆ ಮಾಡಿ ಅಸಭ್ಯವಾಗಿ ಮಾತನಾಡಿ ರಾತ್ರಿ ಮನೆಗೆ ಬರುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಪೊಲೀಸರೇ ಆರೋಪಿಗೆ ರಕ್ಷಣೆ ನೀಡುತ್ತಿದ್ದಾರೆ. ಆರೋಪಿ ಸುದರ್ಶನ್ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸುವ ವರೆಗೂ ಬಜ್ಪೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ.
- ನಿತಿನ್ ಮುತ್ತೂರು, ಭೀಮ್ ಸೇನೆ
ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ


ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಫ್ಐಆರ್ ಗೆ ಸಂಬಂಧಿಸಿದ ಪ್ರತಿಯನ್ನು ದೂರು ದಾರರಿಗೆ ನೀಡಲಾಗಿದೆ. ಮುಂದಿನ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.

- ಪ್ರಕಾಶ್, ಪೊಲೀಸ್ ನಿರೀಕ್ಷಕರು ಬಜ್ಪೆ ಪೊಲೀಸ್ ಠಾಣೆ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News