ಆಲೂರು: ಸರಕಾರಿ ಬಸ್ ಆರಂಭಿಸಲು ಆಗ್ರಹಿಸಿ ಧರಣಿ

Update: 2023-06-26 15:21 GMT

ಕುಂದಾಪುರ, ಜೂ.26: ಕುಂದಾಪುರ ಮಾರ್ಗವಾಗಿ ಮುಳ್ಳಿಕಟ್ಟೆ -ಕಟ್ಟಿನಮಕ್ಕಿ ಮೂಲಕ ಆಲೂರು ಅನಂತರ ಕೊಲ್ಲೂರು ಸಂಪರ್ಕಿಸಿ ಕೊಲ್ಲೂರಿನಿಂದ ಆಲೂರು ಮಾರ್ಗವಾಗಿ ಕುಂದಾಪುರ ಸಂಪರ್ಕಿಸುವ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸುವಂತೆ ಆಗ್ರಹಿಸಿ ಇಂದು ಆಲೂರು ಗ್ರಾಪಂ ಎದುರುಗಡೆ ಸ್ಥಳೀಯರು ಧರಣಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, 2011ರ ಜನಗಣತಿ ಪ್ರಕಾರ ಆಲೂರಿನಲ್ಲಿ 707 ಕುಟುಂಬಗಳಿದ್ದು 3584 ಜನಸಂಖ್ಯೆ ಹೊಂದಿರುವ ಗ್ರಾಮವಾಗಿದೆ. ಅಲ್ಲದೇ ಸಾಕ್ಷರತೆಯಲ್ಲಿ ಹಿಂದುಳಿದ ಗ್ರಾಮವಾಗಿದೆ. ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಕಾಲೇಜುಗಳಿಗೆ ಹೋಗಿ ಬರಲು 22 ಕಿಮೀ ದೂರದಲ್ಲಿರುವ ಕುಂದಾಪುರ ಅಥವ ಬೈಂದೂರಿಗೆ 35ಕಿಮೀ ಕ್ರಮಿಸಬೇಕಾಗಿದೆ. ಆದುದರಿಂದ ಜಿಲ್ಲಾಡಳಿತವು ಕೊಲ್ಲೂರು-ಆಲೂರು-ಕುಂದಾಪುರಕ್ಕೆ ಸರಕಾರಿ ಬಸ್ಸುಗಳನ್ನು ಆರಂಭಿಸಿದರೆ ಗ್ರಾಮದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಮಾತನಾಡಿ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆ ಆಲೂರಿನ ಮಹಿಳೆಯರಿಗೆ ಸರಕಾರಿ ಬಸ್ಸಿಲ್ಲದೇ ವಂಚನೆಯಾಗುತ್ತಿದ್ದು ಸೌಲಭ್ಯಗಳನ್ನು ಪಡೆಯಲು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕೆ ಅಣಿಯಾಗಬೇಕು ಎಂದು ಕರೆ ನೀಡಿದರು.

ಮನವಿಯನ್ನು ಕಟ್ಟಡ ಕಾರ್ಮಿಕರ ಆಲೂರು ಅಧ್ಯಕ್ಷ ರಘುರಾಮ ಆಚಾರ್ ಓದಿದರು. ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ, ಉಪಾಧ್ಯಕ್ಷ ರವಿಶೆಟ್ಟಿ ಮನವಿ ಸ್ವೀಕರಿಸಿದರು. ಧರಣಿಯಲ್ಲಿ ನಾಗರತ್ನ ನಾಡ, ರವಿ ವಿ.ಎಂ., ಚಂದ್ರಶೇಖರ ವಿ., ಸುಮಿತ್ರಾ ಆಲೂರು, ಆಶಾ ಆಲೂರು, ಗೌರಿ ಆಲೂರು, ಅಂಬಿಕಾ ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕರ ಆಲೂರು ಕಾರ್ಯದರ್ಶಿ ಗಣೇಶ್ ಆಚಾರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News