ಮಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ದಾಳಿ ಖಂಡಿಸಿ ಪ್ರತಿಭಟನೆ

Update: 2023-07-01 12:48 GMT

ಮಂಗಳೂರು, ಜು.1: ಮಣಿಪುರದಲ್ಲಿ ಸುಮಾರು 2 ತಿಂಗಳಿನಿಂದ ಕ್ರೈಸ್ತರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ನೇತೃತ್ವದಲ್ಲಿ ಕ್ರೈಸ್ತರು ಶನಿವಾರ ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಿದರು.

ಮಣಿಪುರ ಹಿಂಸಾಚಾರವನ್ನು ತಡೆಗಟ್ಟಲು ಕೇಂದ್ರ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ನೆಲೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ ಮಣಿಪುರದಲ್ಲಿ ವರ್ಣಭೇದ ನೀತಿ ಹೆಚ್ಚುತ್ತಿದೆ.ಅಲ್ಲಿನ ಹಿಂಸಾಚಾರದಲ್ಲಿ ಹಲವಾರು ಮಂದಿ ಸಾವನ್ನಪ್ಪಿ ದ್ದಾರೆ, ಹಲವರು ಗಾಯಗೊಂಡಿದ್ದಾರೆ. ಅಲ್ಲಿ ಕ್ರೈಸ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಅಲ್ಪಸಂಖ್ಯಾತರಿಗೆ ತುಂಬಾ ಕಷ್ಟವಾಗಿದೆ.ರಕ್ಷಣೆ ಇಲ್ಲದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡುವುದಾಗಲಿ ಅಥವಾ ಈ ವಿಷಯದ ಬಗ್ಗೆ ಮಾತನಾಡುವ ನಿಟ್ಟಿನಲ್ಲಿ ಆಸಕ್ತಿ ವಹಿಸಿಲ್ಲ. ಇಂತಹ ಹಿಂಸಾಚಾರಕ್ಕೆ ಕಡಿವಾಣ ಹಾಕಲು ವಿಫಲವಾದರೆ ಅದು ಇಡೀ ದೇಶಕ್ಕೆ ಮತ್ತು ಜಗತ್ತಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಇದು ಸರಕಾರಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದರು.

ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ಕೇಂದ್ರೀಯ ನಿರ್ದೇಶಕ ಫಾ.ಶಾಜಿ ವಿ.ಜೆ.ಅವರು ಮಾತನಾಡಿ, ಮಣಿಪುರದಲ್ಲಿ ಸಂವಿಧಾನ ಬದ್ಧವಾಗಿ ಜೀವನ ನಡೆಸುತ್ತಿದ್ದ ಕ್ರೈಸ್ತರಲ್ಲಿ ಭಯ ಕಾಡುತ್ತಿದೆ.ಎರಡು ತಿಂಗಳು ಕಳೆದರೂ ಹದ್ದುಬಸ್ತಿಗೆ ತರಲು ಸಾಧ್ಯವಾಗಿಲ್ಲ ಎಂದರೆ ರಾಜ್ಯ ಮತ್ತು ಕೇಂದ್ರ ಸರಕಾರ ವೈಫಲ್ಯವಾಗಿದೆ. ಅಲ್ಪಸಂಖ್ಯಾತ ಸಮುದಾಯ ತುಳಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಸಫಲವಾದ ಕೇಂದ್ರ ಸರಕಾರ, ಕೇವಲ 32 ಲಕ್ಷ ಜನಸಂಖ್ಯೆ ಇರುವ ಮಣಿಪುರ ಕುರಿತಾಗಿ ಯಾಕೆ ನಿರ್ಲಕ್ಷ್ಯ ವಹಿಸಿದೆ. ಮಣಿಪುರದಲ್ಲಿ ಶಾಂತಿ ಕಾಪಾಡಬೇಕಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಬೆಟ್ಟಿ ನೆಡುನಿಲಮ್ ಅವರು ಮಾತನಾಡಿ, ಮಣಿಪುರದ ಕೈಸ್ತರು ಕೃಷಿ ಜೀವನ ನಡೆಸುತ್ತಿದ್ದರು. ಇಂದು ಮನೆ ಮಠಗಳನ್ನಿ ಬಿಟ್ಟು ಕಾಡಿನೊಳಗೆ ವಾಸಿಸುವ ಸನ್ನಿವೇಶ ಬಂದಿದೆ. ಕಾಳಜಿ ಕೇಂದ್ರಗಳಲ್ಲಿ ಇರುವವರನ್ನು ಮೃಗಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೆಎಸ್‌ಎಂಸಿಎ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ., ಖಜಾಂಚಿ ಜಿಮ್ಸನ್, ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ಜಾಗತಿಕ ಸಮಿತಿ ಕಾರ್ಯದರ್ಶಿ ಬೆನ್ನಿ ಆ್ಯಂಟನಿ, ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್ ರಾಜ್ಯಾಧ್ಯಕ್ಷ ಕ್ಷೇವಿಯರ್ ಪಾಲೇಲಿ, ಪ್ರ. ಕಾರ್ಯದರ್ಶಿ ಆ್ಯಂಟನಿ ವಿಲ್ಸನ್, ಕರ್ನಾಟಕ ಸೀರೋ ಮಲಬಾರ್ ಕಥೊಲಿಕ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಸೆಬಾಸ್ಟಿಯನ್ ಪಿ.ಪಿ. ಮಾಧ್ಯಮ ಸಂಯೋಜನಕ ಎಲಿಯಾಸ್ ಫೆರ್ನಾಂಡಿಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು, ಧರ್ಮ ಭಗಿನಿಯರು, ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News