ಮನೋವೈದ್ಯೆ ಡಾ.ಪವಿತ್ರಾಗೆ ‘ಅಕಲಂಕ ದತ್ತಿ ಪುರಸ್ಕಾರ’ ಪ್ರದಾನ
ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ಎಂಜಿಎಂ ಕಾಲೇಜಿನ ಆಶ್ರಯದಲ್ಲಿ ಡಾ.ಉಪ್ಪಂಗಳ ರಾಮಭಟ್ಟ ಮತ್ತು ಶಂಕರಿ ಆರ್. ಭಟ್ಟರ ‘ಅಕಲಂಕ ದತ್ತಿ ಪುರಸ್ಕಾರ’ ಕಾರ್ಯಕ್ರಮ ರವಿವಾರ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು.
ಸಾಹಿತಿ ಪ್ರೊ. ಎಂ.ಎಲ್.ಸಾಮಗ, ಸಾಹಿತಿ, ಮನೋವೈದ್ಯೆ ಡಾ.ಕೆ.ಎಸ್. ಪವಿತ್ರಾ ಅವರಿಗೆ ಅಕಲಂಕ ದತ್ತಿ ಪುರಸ್ಕಾರ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಡಾ.ಕೆ.ಎಸ್.ಪವಿತ್ರಾ, ಕನ್ನಡದಲ್ಲಿ ವ್ಯಾಕರಣ ಗ್ರಂಥಗಳು ಹೆಚ್ಚು ಪ್ರಚಾರ ಪಡೆಯದಿರುವುದು ಖೇದಕರ. ಸಾಹಿತ್ಯಕ್ಕೆ ಪ್ರತಿಭೆ ಮಾತ್ರ ಸಾಲದು. ಅಪಾರ ಅಧ್ಯಯನವೂ ಅಗತ್ಯ. ಗುಣಮಟ್ಟದ ಸಾಹಿತ್ಯ, ಪುಸ್ತಕಗಳಿಂದ ಇದು ಹೊರಹೊಮ್ಮಲು ಸಾಧ್ಯವಿದೆ. ಸಾಹಿತಿಗಳಿಗೆ ಪರಿಶ್ರಮ, ಶಿಸ್ತು ಅಗತ್ಯ ಎಂದರು.
ಕಾರ್ಯಕ್ರಮವನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಉಪ್ಪಂಗಳ ರಾಮಭಟ್ ಅವರ ಪತ್ನಿ ಶಂಕರಿ, ಕಸಾಪ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಬ್ರಹ್ಮಾವರ ತಾ.ಅಧ್ಯಕ್ಷ ರಾಮಚಂದ್ರ ಐತಾಳ್ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಾಡಿ ಸ್ವಾಗತಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ. ವಂದಿಸಿದರು. ಬೈಂದೂರು ತಾಲೂಕು ಕಸಪಾ ಅಧ್ಯಕ್ಷ ರಘು ನಾಯಕ್ ಕಾರ್ಯಕ್ರಮ ನಿರೂಪಿಸಿದರು.