ವಿಶ್ವಶಾಂತಿ, ಜಗತ್ತಿನ ಕಲ್ಯಾಣಕ್ಕಾಗಿ ಪುತ್ತಿಗೆ ವಿಶ್ವ ಗೀತಾ ಪರ್ಯಾಯ: ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

Update: 2023-07-14 16:09 GMT

ಉಡುಪಿ, ಜು.14: ವಿಶ್ವಶಾಂತಿ ಹಾಗೂ ಜಗತ್ತಿನ ಕಲ್ಯಾಣಕ್ಕಾಗಿ ಮುಂಬರುವ ತಮ್ಮ ನಾಲ್ಕನೇ ಎರಡು ವರ್ಷಗಳ (2024ರಿಂದ 2026) ಪರ್ಯಾಯ ವನ್ನು ವಿಶ್ವ ಗೀತಾ ಪರ್ಯಾಯವಾಗಿ ಶ್ರೀಕೃಷ್ಣನಿಗೆ ಅರ್ಪಿಸಲಾ ಗುವುದು ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಹೇಳಿದ್ದಾರೆ.

ಪುತ್ತಿಗೆ ಮಠದ ಸುಗುಣ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪುತ್ತಿಗೆ ಪರ್ಯಾಯೋತ್ಸವ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿ, ಆರ್ಥಿಕ ಜಾಗತೀಕರಣಕ್ಕಿಂತ, ಪಾರಮಾರ್ಥಿಕ(ಆಧ್ಯಾತ್ಮ ವಾದ) ಜಾಗತೀಕರಣದ ಹಾದಿಯಲ್ಲಿ ಸಾಗಿದರೆ ಜಗತ್ತಿನಲ್ಲಿ ಆಧ್ಯಾತ್ಮಿಕ ಸುಖದ ಜತೆಗೆ ಶಾಂತಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಪಂಚ ಯೋಜನೆ: ಈಗಾಗಲೇ ಮೂರು ಪರ್ಯಾಯ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಪುತ್ತಿಗೆ ಶ್ರೀಗಳು ನಾಲ್ಕನೇ ಪರ್ಯಾಯ ಅವಧಿಯಲ್ಲಿ ಐದು ಹೊಸ ಯೋಜನೆಗಳನ್ನು ಪ್ರಕಟಿಸಿದರು. ತಮ್ಮ ಸುವರ್ಣ ಸನ್ಯಾಸ ಸ್ಮರಣೆಗಾಗಿ ಶ್ರೀಕೃಷ್ಣಮಠದ ಪ್ರಾಂಗಣದಲ್ಲಿ ಪಾರ್ಥಸಾರಥಿ ಸುವರ್ಣ ಸಣ್ಣ ರಥ ಸಮರ್ಪಣೆ, ಕೋಟಿ ಗೀತಾ ಲೇಖನ ಯಜ್ಞ, ಕಲ್ಸಂಕದಲ್ಲಿ ಶ್ರೀಕೃಷ್ಣನ ಪ್ರತಿಮೆ ಹಿಡಿದ ಮಧ್ವರ ಪ್ರತಿಮೆ ಸಹಿತ ಸ್ವಾಗತ ಗೋಪುರ ನಿರ್ಮಾಣ, ಉಡುಪಿಯಲ್ಲಿ ಅಂತಾರಾಷ್ಟ್ರೀಯ ಭಗವದ್ಗೀತಾ ಸಮ್ಮೇಳನ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿತ್ಯ ಗೀತಾ ಪಾರಾಯಣ ಯಜ್ಞ ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು ಎಂದರು.

200 ಕೊಠಡಿಗಳ ಕ್ಷೇತ್ರಾವಾಸ (ವಸತಿಗೃಹ) ಹಾಗೂ ಆಧ್ಯಾತ್ಮಿಕ ಪುನಶ್ಚೇತನ ಕೇಂದ್ರ(ರಿಟ್ರೀಟ್ ಸೆಂಟರ್)ವನ್ನು ಜಗತ್ತಿನ ಭಕ್ತರಿಗಾಗಿ ಉಡುಪಿಯಲ್ಲಿ ಪ್ರಾರಂಭಿಸಲಾಗುವುದು. ಉಡುಪಿ ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಕ್ಷೇತ್ರವಾಗಿ ಹೊರಹೊಮ್ಮಬೇಕು ಎಂಬುದು ತಮ್ಮ ಆಶಯವಾಗಿದೆ ಎಂದವರು ತಿಳಿಸಿದರು.

ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು.

ಪುತ್ತಿಗೆ ಶ್ರೀಗಳ ಆಪ್ತ ಕಾರ್ಯದರ್ಶಿ ಪ್ರಸನ್ನಾಚಾರ್ ಸ್ವಾಗತಿಸಿ, ಬಿ. ಗೋಪಾಲಾಚಾರ್ ಪ್ರಾಸ್ತಾವಿಕ ಮಾತನ್ನಾಡಿದರು. ನಾಗರಾಜ ಆಚಾರ್ಯ ವಂದಿಸಿದರೆ, ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಡಾ.ಹೆಗ್ಗಡೆ ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕ್ಷ

2024ರ ಜ.18ರಂದು ನಡೆಯುವ ಪುತ್ತಿಗೆ ಪರ್ಯಾಯದ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಗೌರವಾಧ್ಯಕ್ಷರಾಗಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಯ್ಕೆಯಾಗಿದ್ದಾರೆ.

ಮಹಾಪೋಷಕರು: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಮಹಿಳಾ ಮತುತಿ ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷ: ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕಾರ್ಯಾಧ್ಯಕ್ಷ: ಕೆ. ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ: ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾರ್ಗದರ್ಶಕ: ಲಕ್ಷ್ಮೀನಾರಾಯಣ ಅಸ್ರಣ್ಣ ಕಟೀಲು ನೇಮಕ ಗೊಂಡಿದ್ದಾರೆ.

"ಉಡುಪಿ ಬಾಲಕೃಷ್ಣನ ಪೂಜೆಯನ್ನು ನಮ್ಮ 14ನೇ ವಯಸ್ಸಿನಲ್ಲಿ 1976-78ರಲ್ಲಿ ಮುಗ್ಧವಾಗಿ ಮಾಡಿದ್ದೆ. ಆ ಸಂತೋಷ ಬದುಕಿನಲ್ಲಿ ಮತ್ತೆಂದೂ ಬಾರದು. 5ನೇ ಪರ್ಯಾಯವನ್ನು ಶಿಷ್ಯ (ಶ್ರೀಸುಶ್ರೀಂದ್ರತೀರ್ಥರು)ಮುನ್ನಡೆಸಲಿದ್ದಾರೆ".

-ಶ್ರೀಸುಗುಣೇಂದ್ರತೀರ್ಥರು, ಪುತ್ತಿಗೆ ಮಠ ಉಡುಪಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News