ರಾಷ್ಟ್ರೀಯ ಲೋಕ್ ಅದಾಲತ್: ಒಂದೇ ದಿನದಲ್ಲಿ ಒಟ್ಟು 32930 ಪ್ರಕರಣ ಇತ್ಯರ್ಥ
ಉಡುಪಿ, ಜು.9: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ನಿರ್ದೆಶನದ ಮೇರೆಗೆ ಜು.8ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಆಯೋಜಿಸಲಾದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಂದೇ ದಿನ ಒಟ್ಟು 32930 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ 19,51,12,983ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್‌ನ್ನು ಆಯೋಜಿಸಲಾಗಿತ್ತು.
ಅದಾಲತ್‌ನಲ್ಲಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -62, ಚೆಕ್ಕು ಅಮಾನ್ಯ ಪ್ರಕರಣ-294, ಬ್ಯಾಂಕ್/ ಹಣ ವಸೂಲಾತಿ ಪ್ರಕರಣ- 14, ಎಂ.ವಿ.ಸಿ ಪ್ರಕರಣ-166, ವೈವಾಹಿಕ ಪ್ರಕರಣ-5, ಸಿವಿಲ್ ಪ್ರಕರಣ-211, ಇತರೇ ಕ್ರಿಮಿನಲ್ ಪ್ರಕರಣ- 3630 ಹಾಗೂ ವ್ಯಾಜ್ಯ ಪೂರ್ವ ದಾವೆ-28548 ಪ್ರಕರಣಗಳನ್ನು ರಾಜೀ ಮಾಡಲಾಯಿತು.
ತಿಂಗಳೊಳಗೆ ವಿಮಾ ಪರಿಹಾರ
ಇತ್ತೀಚೆಗೆ ಉಡುಪಿ ಕಡಿಯಾಳಿ ಬಳಿ ಸಂಭವಿಸಿದ ಅಪಘಾತಕ್ಕೆ ಸಂಬಂಧ ಪಟ್ಟಂತೆ ಗಾಯಗೊಂಡ ವ್ಯಕ್ತಿಗಳಿಬ್ಬರು ವಿಮಾ ಪರಿಹಾರ ಕೋರಿ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ರಾಯಲ್ ಸುಂದರಂ ವಿಮಾ ಕಂಪೆನಿಯ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಜೂ.8ರಂದು ನ್ಯಾಯಾಲಯದಿಂದ ವಿಮಾ ಸಂಸ್ಥೆಗೆ ನೋಟೀಸು ಜಾರಿಗೊಳಿಸಿ ಜು.11ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ವಿಮಾ ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ, ಕೇವಲ ಒಂದು ತಿಂಗಳ ಅವಧಿಯೊಳಗೆ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ ರಾಜಿ ಸಂಧಾನ ಪತ್ರವನ್ನು ಲೋಕ ಅದಾಲತ್‌ನಲ್ಲಿ ಸಲ್ಲಿಸಲಾಯಿತು.
ಅಪಘಾತ ವಿಮಾ ಪರಿಹಾರ ಪ್ರಕರಣದಲ್ಲಿ ಇಷ್ಟೊಂದು ಕಡಿಮೆ ಅವಧಿ ಯಲ್ಲಿ ವಿಮಾ ಪರಿಹಾರ ಇತ್ಯರ್ಥವಾಗಿರುವುದು ಒಂದು ದಾಖಲೆ ಎಂದು ರಾಯಲ್ ಸುಂದರಂ ವಿಮಾ ಸಂಸ್ಥೆಯ ನ್ಯಾಯವಾದಿ ಎಚ್.ಆನಂದ ಮಡಿವಾಳ ತಿಳಿಸಿದ್ದಾರೆ.