ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ: ರಸ್ತೆ ಸಮೇತ ಮಣ್ಣು ಕುಸಿತ

Update: 2023-07-10 17:16 GMT

ಉಡುಪಿ: ನಿರಂತರ ಸುರಿದ ಮಳೆಯಿಂದಾಗಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ಪಾಸ್ ಕಾಮಗಾರಿಯ ಮಣ್ಣು ಕುಸಿದ ಪರಿಣಾಮ ಕುಂದಾಪುರ- ಉಡುಪಿ ಮಾರ್ಗದ ಸರ್ವಿಸ್ ರಸ್ತೆ ಹಾಗೂ ತಡೆಗೋಡೆಗೆ ಹಾನಿಯಾಗಿದೆ. ಈ ಅಪಾಯಕಾರಿ ರಸ್ತೆಯಿಂದ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ನಿರಂತರ ಮಳೆಯಿಂದಾಗಿ ಮಣ್ಣು ಹದಗೊಂಡಿದ್ದು, ಇದರಿಂದ ಇಂದು ಬೆಳಗ್ಗೆ ಸಾರ್ವಜನಿಕರ ಎದುರಲ್ಲಿಯೇ ಸರ್ವಿಸ್ ರಸ್ತೆ ಸಮೇತ ಮಣ್ಣು ಕುಸಿದು ತಡೆಗೋಡೆ ಮೇಲೆ ಬಿದ್ದಿದೆ. ಇದರಿಂದ ತಡೆಗೋಡೆ ಕಾಮಗಾರಿಗೆ ಹಾನಿ ಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಇದಲ್ಲದೆ ಅಲ್ಲೇ ಮುಂದುವರೆದ ಸರ್ವಿಸ್ ರಸ್ತೆಯಲ್ಲಿ ಬಿರುಕು ವಿಸ್ತರಿಸಿದ್ದು, ಇದರಿಂದ ರಸ್ತೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.

ನಿಧಾನಗತಿಯ ಕಾಮಗಾರಿ: ಪ್ರತಿದಿನ ಟ್ರಾಫಿಕ್ ಜಾಮ್ನ ಕಿರಿಕಿರಿ ಎದುರಿ ಸುತ್ತಿದ್ದ ಸಂತೆಕಟ್ಟೆ ಜಂಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂಡರ್ಪಾಸ್ ನಿರ್ಮಿಸುವ ನಿಟ್ಟಿನಲ್ಲಿ ಜ.12ಕ್ಕೆ ಶಿಲಾನ್ಯಾಸ ನೆರವೇರಿಸಿತು. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಕೊರೆದು 20 ಅಡಿ ಆಳದ ಹೊಂಡ ನಿರ್ಮಿಸಲಾಯಿತು. ಫೆಬ್ರವರಿ ತಿಂಗಳಲ್ಲಿ ಹೊಂಡದಲ್ಲಿ ಬಂಡೆ ಸಿಕ್ಕಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು. ನಂತರ ಬಂಡೆ ಒಡೆಯುವ ಕಾರ್ಯ ಕೂಡ ಸಾಕಷ್ಟು ನಿಧಾನಗತಿಯಲ್ಲಿ ಸಾಗಿತು. ಮಾ.16ರಂದು ಹೊಂಡದ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭಿಸಲಾಯಿತು. ಈ ಕಾಮಗಾರಿ ಕೂಡ ನಿಧಾನ ಗತಿಯಲ್ಲಿ ಸಾಗುತ್ತಿದೆ. ಈ ಮಧ್ಯೆ ಮಳೆಗಾಲ ಆರಂಭಗೊಂಡು ಮಣ್ಣು ಕುಸಿಯು ಭೀತಿ ಎದುರಾಯಿತು. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಉಡುಪಿ ಯಿಂದ ಕುಂದಾಪುರ ಹೋಗುವ ರಸ್ತೆ ಬದಿಯ ಹೊಂಡಕ್ಕೆ ಟರ್ಪಾಲು ಹೊದಿಕೆಯನ್ನು ಹಾಕಲಾಯಿತು.ಇನ್ನೊಂದು ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಮುಂದು ವರೆಸಲಾಯಿತು. ಆದರೂ ಮಣ್ಣು ಕುಸಿಯುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸಿದ್ದರು. ಈ ಬಗ್ಗೆ ಯಾವುದೇ ಕ್ರಮ ಕೂಡ ಇಲಾಖೆ ತೆಗೆದುಕೊಂಡಿರಲಿಲ್ಲ. ಇದೀಗ ತಡೆಗೋಡೆ ಕಾಮಗಾರಿ ಕ್ಷಿಪ್ರವಾಗಿ ಪೂರ್ಣಗೊಳಿಸದ ಪರಿಣಾಮ ಈ ಮಣ್ಣು ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಪರ್ಕ ಕಡಿತದ ಭೀತಿ: ಇಲ್ಲಿನ ಸರ್ವಿಸ್ ರಸ್ತೆ ಕುಸಿಯುತ್ತಿರುವುದರಿಂದ ಇಲ್ಲಿನ ನೂರಾರು ಕುಟುಂಬ ಗಳಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದು ರಾಗಿದೆ. ಅಲ್ಲದೆ ಸಮೀಪ ದಲ್ಲಿರುವ ಅಂಗಡಿಮುಗ್ಗಟ್ಟುಗಳು ಅಪಾಯಕಾರಿ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.ಕುಸಿದ ಸರ್ವಿಸ್ ರಸ್ತೆಯ ಅಣತಿ ಬಹುಮಹಡಿ ವಸತಿ ಸಮುಚ್ಛಯ ಇದ್ದು, ಇಲ್ಲಿನ 108 ಫ್ಲಾಟ್ಗಳ ನಿವಾಸಿಗಳಿಗೆ ಸಂಪರ್ಕ ರಸ್ತೆ ಇಲ್ಲವಾಗಿದೆ. ಅದೇ ರೀತಿ ಈ ರಸ್ತೆಯನ್ನು ಅವಲಂಬಿಸಿರುವ ನಯಂಪಳ್ಳಿಯ 350ಕ್ಕೂ ಅಧಿಕ ಮನೆಯವರು ಇದೀಗ ದಾರಿ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.‘ನಾಲ್ಕು ತಿಂಗಳ ಒಳಗೆ ಕಾಮಾಗರಾರಿ ಪೂರ್ಣಗೊಳಿಸಿ ಒಂದು ಕಡೆ ರಸ್ತೆ ಬಿಟ್ಟು ಕೊಡುವುದಾಗಿ ಹೇಳಿದ್ದರು. ಈಗ ನೋಡಿದರೆ ರಾಷ್ಟ್ರೀಯ ಹೆದ್ದಾರಿ ಬಿಡಿ, ಸರ್ವಿಸ್ ರಸ್ತೆ ಕೂಡ ಇಲ್ಲದಂತೆ ಮಾಡಿದ್ದಾರೆ. ಶಾಲೆ ಮಕ್ಕಳು ಹೆದ್ದಾರಿ ದಾಟಿ ಹೋಗಲು ವ್ಯವಸ್ಥೆಯೇ ಇಲ್ಲವಾಗಿದೆ. ಹೆದ್ದಾರಿ ಬ್ಲಾಕ್ ಆದರೆ ಮಕ್ಕಳು ಶಾಲೆಗೆ ಹೋಗಲು ಒಂದು ಗಂಟೆ ವಿಳಂಬವಾಗಿ ಸಮಸ್ಯೆ ಆಗುತ್ತಿದೆ. ಈ ಬದಿಯವರು ಔಷಧಿ ತರಲು ಮೆಡಿಕಲ್ಗೆ ಹೋಗಲು ಕೂಡ ಆಗುತ್ತಿಲ್ಲ’ ಎಂದು ನಯಂಪಳ್ಳಿಯ ನವೀನ್ ನಾಯ್ಕಿ ದೂರಿದರು.

ಸ್ಥಳಕ್ಕೆ ಉಡುಪಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಡಿವೈಎಸ್ಪಿ ದಿನಕರ್ ಹಾಗೂ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಸಿದ ರಸ್ತೆ ಸಮೀಪ ಯಾರು ಹೋಗದಂತೆ ಕೆಂಪು ಪಟ್ಟಿಯನ್ನು ಅಳವಡಿಸಿ ಎಚ್ಚರಿಕೆ ನೀಡಲಾಗಿದೆ.ಬಾಕ್ಸ್ ಮಾಡಿ...ಸಂಸದರು, ಅಧಿಕಾರಿಗಳ ವಿರುದ್ಧ ಆಕ್ರೋಶಅವೈಜ್ಞಾನಿಕ ಕಾಮಗಾರಿ ಬಗ್ಗೆ ಚಕಾರ ಎತ್ತದ ಹಾಗೂ ಇತ್ತ ತಲೆ ಹಾಕಿ ನೋಡದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಲ್ಲಿಗೆ ಸಂಸದರು, ಜನಪ್ರತಿನಿಧಿಗಳು, ಅಧಿಕಾರಿಗಳು ಬಂದಿರುವುದು ನಾವು ನೋಡೇ ಇಲ್ಲ. ಸಂಸದರು ಇಲ್ಲಿನ ಅವ್ಯವಸ್ಥೆಯನ್ನು ಬಂದು ನೋಡಬೇಕು. ಅಲ್ಲದೆ ಸ್ಥಳೀಯರಿಗೆ ಆಗಿರುವ ಸಮಸ್ಯೆಯನ್ನು ಪರಿಹರಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಮೊದಲು ಸರ್ವಿಸ್ ರಸ್ತೆ ಸರಿ ಮಾಡಬೇಕು. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣ ಮಾಡಿಕೊಡಬೇಕು ಎಂದು ನವೀನ್ ನಾಯ್ಕೆ ಒತ್ತಾಯಿಸಿದರು.

‘ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಆದಷ್ಟು ಬೇಗ ಪರಿಸ್ಥಿತಿಯನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದೇನೆ. ವಾಹನ ಸಂಚಾರಕ್ಕೆ ಎದುರಿನ ಭಾಗ ಮಾತ್ರ ಬಳಕೆಯಾಗುತ್ತಿದ್ದು, ಅನಾಹುತ ಸಂಭವಿಸಿದ ರಸ್ತೆಯನ್ನು ಸ್ಥಳೀಯ ನಿವಾಸಿಗಳು ಮಾತ್ರ ಬಳಸುತ್ತಿ ದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ರಸ್ತೆಯನ್ನು ಅವಲಂಬಿಸಿರುವ 300ಕ್ಕೂ ಅಧಿಕ ಕುಟುಂಬಗಳಿಗೆ ಹೋಗಲು ಪರ್ಯಾಯ ರಸ್ತೆಯನ್ನು ಹುಡುಕುತ್ತಿದ್ದಾರೆ. ಅಲ್ಲದೆ ಹೆಚ್ಚುವರಿ ಹಾನಿಯಾಗದಂತೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕೂಡಲೇ ಇಲ್ಲಿನ ತಡೆಗೋಡೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ
‘ಈ ಪರಿಸರದಲ್ಲಿ ಬಂಡೆ ಇದ್ದರೂ ಅಂಡರ್ಪಾಸ್ ಮಾಡುವ ಮೊದಲು ಯಾವುದೇ ರೀತಿಯಲ್ಲೂ ಮಣ್ಣು ಪರೀಕ್ಷೆ ಮಾಡಿರಲಿಲ್ಲ. ಅವೈಜ್ಞಾನಿಕವಾಗಿ ಅಂಡರ್ಪಾಸ್ ಮಾಡಿದ್ದಾರೆ. ಇಲ್ಲಿ ಓವರ್ ಪಾಸ್ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಗುತ್ತಿಗೆದಾರರು 10 ಜನ ಇಟ್ಟುಕೊಂಡು ಇಷ್ಟು ದೊಡ್ಡ ಕಾಮಗಾರಿ ನಡೆಸುತ್ತಿದ್ದಾರೆ. ಹಾಗಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ’-ಚಿದಾನಂದ ಸಂತೆಕಟ್ಟೆ, ಸ್ಥಳೀಯ ನಿವಾಸಿ
Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News