ಸೇವೆ, ಎಲ್ಲರ ಒಳಗೊಳ್ಳುವಿಕೆ, ಉತ್ತಮ ಆಡಳಿತ ಮೋದಿ ಸರಕಾರದ ಸಾಧನೆ: ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ, ಜು.14: ಸೇವೆ, ಎಲ್ಲರನ್ನು ಒಳಗೊಳ್ಳುವಿಕೆ ಹಾಗೂ ಉತ್ತಮ ಆಡಳಿತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಕಳೆದ 9 ವರ್ಷಗಳ ಸಾಧನೆಗಳಲ್ಲಿ ಪ್ರಮುಖವಾದುದು ಎಂಬುದು ನನ್ನ ನಂಬಿಕೆ ಯಾಗಿದೆ ಎಂದು ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಹೊಟೇಲ್ ಕಂಟ್ರಿಇನ್ ಸಭಾಂಗಣದಲ್ಲಿ ಆಯೋಜಿಸಲಾದ ಪ್ರಬುದ್ಧರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ 9 ವರ್ಷಗಳ ಸಾಧನೆಗಳ ಕುರಿತು ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಕಳೆದ ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ವಿವಿಧ ಸಂಘಟನೆಗಳ ಕಾರ್ಯಕರ್ತರು ತೋರಿದ ‘ಸೇವಾ’ ಮನೋಭಾವ ಇಡೀ ಸಾಧನೆಯ ಹೆಚ್ಚುಗಾರಿಕೆಯಾಗಿದೆ. ಕೊರೋನಾ ಸಮಯದಲ್ಲಿ ಬಿಜೆಪಿ ಸರಕಾರ ದೇಶದ ಮೂಲೆಮೂಲೆಗಳಲ್ಲಿದ್ದ ಜನರನ್ನು ರೋಗದಿಂದ ರಕ್ಷಿಸುವಲ್ಲಿ ವಿಶೇಷ ಮುತುವರ್ಜಿ ತೋರಿದೆ. ಅವರ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ನೀಡಿದೆ ಎಂದರು.
ಮೋದಿ ಸರಕಾರ ಕಳೆದ 9 ವರ್ಷಗಳಲ್ಲಿ ಬಡವರನ್ನು ಸಬಲೀಕರಿಸುವ ಮೂಲಕ ‘ಬಡತನ’ ದೇಶದಲ್ಲಿ ವಿಸ್ತರಿಸದಂತೆ ನೋಡಿಕೊಂಡಿದೆ. ಇದರೊಂದಿಗೆ ಬಡವರು, ನಿರ್ಗತಿಕರು ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ -ಆಯುಷ್ಮಾನ್ ಭಾರತ್, ಪ್ರದಾನಮಂತ್ರಿ ಸೇವಾನಿಧಿ- ಯೋಜನೆಗಳ ಮೂಲಕ ಅವರ ಎಲ್ಲಾ ಸಂಕಷ್ಟಗಳನ್ನು ನಿವಾರಿಸಲಾಗಿದೆ. ಉಚಿತ ಆರೋಗ್ಯ ಸೇವೆ, ಮೆಡಿಸಿನ್, ಅಡುಗೆ ಅನಿಲ, ಮನೆ, ಶೌಚಾಲಯ, ಉತ್ತಮ ರಸ್ತೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಮೇಲಕ್ಕೆತ್ತಲಾಗಿದೆ ಎಂದರು.
ಬಿಜೆಪಿ ಸರಕಾರದ ಮೂರನೇ ಅತೀಮುಖ್ಯ ಸಾಧನೆ ಎಂದರೆ ಉತ್ತಮ ಆಡಳಿತ ನಿರ್ವಹಣೆ. ಇದರಲ್ಲಿ ಭ್ರಷ್ಟಾಚಾರ ರಹಿತ ಆಡಳಿತ, ಅನುದಾನದ ಸದ್ಭಳಕೆ ಹಾಗೂ ಕನಿಷ್ಠ ಮಟ್ಟದ ವೇಸ್ಟ್ ಮೂಲಕ ದೇಶಕ್ಕೆ ಉತ್ತಮ ಸರಕಾರವೊಂದನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ಸಂಕಷ್ಟಗಳು ಹಾಗೂ ಭಾರತದ ಬಹುತ್ವದ ಧ್ರುವೀಕರಮದ ಹೊರತಾಗಿಯೂ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಗ ವಿಶ್ವದಾದ್ಯಂತ ಗುರುತಿಸಲಾಗುತ್ತಿದೆ. ವಿದೇಶಿ ಮಾಧ್ಯಮಗಳ ಟೀಕೆಯ ಹೊರತಾಗಿಯೂ ಅದೇ ದೇಶದ ಉನ್ನತ ಗೌರವಗಳೆಲ್ಲವೂ ಪ್ರಧಾನಿಯವರಿಗೆ ಸಲ್ಲುತ್ತಿವೆ. 2014ರಲ್ಲಿ 142ನೇಸ್ಥಾನದಲ್ಲಿದ್ದ ಭಾರತ, 2019ರ ವೇಳೆಗೆ 63ನೇ ಸ್ಥಾನಕ್ಕೇರಿತ್ತು. ಈಗ ಇನ್ನೂ ಉತ್ತಮ ಸ್ಥಾನದಲ್ಲಿರುವ ಸಾಧ್ಯತೆ ಇದೆ ಎಂದರು.
ಎಂಎಸ್‌ಎಂಇಗೆ ಒತ್ತು: ತಮ್ಮ ಭಾಷಣದಲ್ಲಿ ಸಣ್ಣ, ಅತಿಸಣ್ಣ ಹಾಗೂ ಸೂಕ್ಷ್ಮ ಉದ್ದಿಮೆಗಳಿಗೆ ಒತ್ತು ಕೊಟ್ಟು ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2013-14ನೇ ಸಾಲಿನ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ 3285 ಕೋಟಿ ರೂ.ಗಳನ್ನು ನೀಡಿದ್ದರೆ, 2023-24ನೇ ಸಾಲಿನಲ್ಲಿ ಇದಕ್ಕೆ 22,138 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಇದರಿಂದಲೇ ಮೋದಿ ಸರಕಾರ ಎಂಎಸ್‌ಎಂಇ ಸೆಕ್ಟರ್‌ಗೆ ನೀಡುತ್ತಿರುವ ಪ್ರೋತ್ಸಾಹವನ್ನು ಅಂದಾಜಿಸಬಹುದು ಎಂದರು.
ಸಾಫ್ಟ್‌ವೇರ್ ಹಾಗೂ ಐಟಿಯಲ್ಲಿ ದೇಶದ ಅತ್ಯುನ್ನತ ಸ್ಥಾನದ ಹೊರತಾಗಿಯೂ ಎಂಎಸ್‌ಎಂಇ ಈಗಲೂ ದೇಶದ ಆರ್ಥಿಕತೆಯ ಬೆನ್ನೆಲುಬಾಗಿಯೇ ಉಳಿದಿದೆ ಎಂದ ಸಚಿವೆ, ಪ್ರಧಾನ ಮಂತ್ರಿ ಲಘು ವ್ಯಾಪಾರಿ ಮನಧನ್ ಯೋಜನಾ ಹಾಗೂ ಸಿಜಿಟಿಎಂಎಸ್‌ಸಿ ಮೂಲಕ 9000 ಕೋಟಿ ರೂ.ಗಳನ್ನು ಉಚಿತ ಸಾಲವನ್ನು ನೀಡಲು ಬಳಸಲಾಗುತ್ತಿದೆ. ಇದರ ಸದುಪಯೋಗವನ್ನು ಎಂಎಸ್‌ಎಂಇ ಕ್ಷೇತ್ರ ಪಡೆಯಬೇಕು ಎಂದು ಜಿಲ್ಲೆಯ ಸಣ್ಣ ಉದ್ದಿಮೆದಾರ ರಲ್ಲಿ ಮನವಿ ಮಾಡಿದರು.
ಆದಾಯ ತೆರಿಗೆ ಪಾವತಿಯಲ್ಲಿ ಸರಕಾರ ಮಾಡಿರುವ ಸುಧಾರಣೆಯ ಕುರಿತು ವಿವರಿಸಿದ ಸಚಿವೆ, ಈಗ ವಾರ್ಷಿಕವಾಗಿ 7.27 ಲಕ್ಷ ರೂ.ವರೆಗೆ ಸಂಪಾದನೆಗೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ ಎಂದರು. ತಮ್ಮ ಸರಕಾರ ಲೆಕ್ಕ ಪರಿಶೋಧಕರಿಗೂ ಹೊಸ ದಿಕ್ಕನ್ನು ತೋರಿಸಿದೆ ಎಂದರು.
ಬಳಿಕ ಅವರು ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ವಿವಿಧ ಸಂಘಟನೆಗಳು ಸಚಿವೆಗೆ ಮನವಿಗಳನ್ನು ಅರ್ಪಿಸಿದವು.
ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ನಾಯಕರಾದ ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಡಾ.ಪಾಂಡುರಂಗ ಲಾಂಗ್ವಾಕರ್ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದರೆ, ಬಾಲಕೃಷ್ಣ ಮುದ್ದೋಡಿ ಕಾರ್ಯಕ್ರಮ ನಿರೂಪಿಸಿದರು.