ಶಕ್ತಿ ಯೋಜನೆ: ಉಡುಪಿ ಜಿಲ್ಲೆಯಲ್ಲಿ 9.71ಲಕ್ಷ ಮಹಿಳೆಯರ ಪ್ರಯಾಣ
ಉಡುಪಿ, ಜು.15: ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಯ ಮೂಲಕ ಉಡುಪಿ ಜಿಲ್ಲೆಯ ಸರಕಾರಿ ಬಸ್‌ಗಳಲ್ಲಿ ಈವರೆಗೆ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14ರವರೆಗೆ 3.62 ಕೋಟಿ ರೂ. ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ವರ್ಗ ಈ ಎಲ್ಲಾ ವರ್ಗದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು ಶೇ. 25ರಿಂದ ಶೇ.30ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ.
ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಜೂನ್ 30ರವರೆಗೆ ಉಡುಪಿ ಘಟಕದಲ್ಲಿ, ನಗರ ಸಾರಿಗೆ ಬಸ್‌ಗಳಲ್ಲಿ 1,00,838 ಮಹಿಳಾ ಪ್ರಯಾಣಿಕರು ಸಂಚರಿಸಿ 14,70,793 ರೂ., ವೇಗದೂತ ಬಸ್ ಗಳಲ್ಲಿ 94,998 ಮಹಿಳಾ ಪ್ರಯಾಣಿಕರು ಸಂಚರಿಸಿ 74,09,003 ರೂ, ಸಾಮಾನ್ಯ ಬಸ್‌ಗಳಲ್ಲಿ 40,232 ಮಹಿಳಾ ಪ್ರಯಾಣಿಕರು ಸಂಚರಿಸಿ 7,94,933 ರೂ. ಆದಾಯ ಬಂದಿದ್ದರೆ, ಕುಂದಾಪುರ ಘಟಕದಲ್ಲಿ ವೇಗದೂತ ಬಸ್‌ಗಳಲ್ಲಿ 71,410 ಮಹಿಳಾ ಪ್ರಯಾಣಿಕರು ಸಂಚರಿಸಿ 63,25,419ರೂ. ಸಾಮಾನ್ಯ ಬಸ್‌ಗಳಲ್ಲಿ 2,41,497 ಮಹಿಳಾ ಪ್ರಯಾಣಿಕರು ಸಂಚರಿಸಿ 43,52,614 ರೂ. ಆದಾಯ ಸೇರಿದಂತೆ ಜಿಲ್ಲೆ ಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ.
ಜುಲೈ 14ರವರೆಗೆ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ ಆದಾಯ ಬಂದಿದ್ದರೆ, ಕುಂದಾಪುರ ಘಟಕ ದಲ್ಲಿ 2,29,557 ಮಹಿಳೆಯರು ಸಂಚರಿಸಿ, ಒಟ್ಟು 80,88,362 ರೂ. ಆದಾಯ ಗಳಿಕೆಯಾಗುವ ಮೂಲಕ ಯೋಜನೆ ಜಾರಿಗೆಯಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿ ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ. ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯದ್ದರೂ ಸಹ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರಕಾರಿ ಬಸ್‌ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದ 68 ಬಸ್‌ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ.
ವಾರಾಂತ್ಯದಲ್ಲಿ ಉಡುಪಿಯ ಶ್ರೀಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆ ಗಳಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಸಹ ಆದಾಯ ಬರುತ್ತಿದೆ.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ ಯೋಜನೆ’ ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕಲು ನೆರವಾಗು ವುದರ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಸಹ ನೆರವು ನೀಡುತ್ತಿದೆ. ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರ ಸಂಖ್ಯೆಯೂ ಸಹ ಅಧಿಕಗೊಂಡಿದ್ದು, ನಷ್ಠದಲ್ಲಿದ್ದ ರಾಜ್ಯದ ಎಲ್ಲಾ ಸರಕಾರಿ ಸಾರಿಗೆ ನಿಗಮಗಳು ಸಹ ಲಾಭದಾಯಕವಾಗಿ ಶೀಘ್ರ ದಲ್ಲಿಯೇ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಲಿವೆ ಎಂಬ ವಿಶ್ವಾಸ ಮೂಡಿದೆ.
‘ನಾನು ಪ್ರತಿದಿನ ಕಟಪಾಡಿಯಿಂದ ಮಣಿಪಾಲಕ್ಕೆ ಉದ್ಯೋಗಕ್ಕಾಗಿ ಬರುತ್ತಿದ್ದು, ಈ ಹಿಂದೆ ಖಾಸಗಿ ಬಸ್‌ನಲ್ಲಿ ಸಂಚರಿಸುವಾಗ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಟ್ಟು ಸೇರಿ 50 ರೂ ವೆಚ್ಚವಾಗುತ್ತಿತ್ತು. ಖಾಸಗಿ ಸಂಸ್ಥೆಯಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವ ನನಗೆ ಪ್ರತಿ ತಿಂಗಳು 1,500ರೂ.ಗಳಿಗೂ ಅಧಿಕ ಸಂಬಳದ ಹಣವನ್ನು ಬಸ್ ಚಾರ್ಜ್‌ಗಾಗಿಯೇ ವೆಚ್ಚ ಮಾಡಬೇಕಿತ್ತು. ಈಗ ಪ್ರತಿ ದಿನ ಉಳಿಯುವ 50ರೂ.ರಿಂದ ಸಂಜೆ ಮಕ್ಕಳಿಗೆ ಹಾಲು ತೆಗೆದು ಕೊಂಡು ಹೋಗಲು ಬಳಸುತ್ತಿದ್ದೇನೆ. ಸರಕಾರದ ಯೋಜನೆ ನನ್ನಂತಹ ಅನೇಕ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಮಹಿಳಾ ಉದ್ಯೋಗಿಗಳಿಗೆ ಬಹಳ ಅನುಕೂಲವಾಗಿದೆ.’
-ಪೂರ್ಣಿಮಾ ಕಟಪಾಡಿ, ಖಾಸಗಿ ಸಂಸ್ಥೆ ಉದ್ಯೋಗಿ.
‘ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂಬ ಕಾರಣಕ್ಕೆ ಸಾರಿಗೆ ಸಿಬ್ಬಂದಿಗಳು ಮಹಿಳಾ ಪ್ರಯಾಣಿಕರ ಬಗ್ಗೆ ಯಾವುದೇ ನಿರ್ಲಕ್ಷ್ಯ ತೋರದೇ ನಿಗದಿತ ಸ್ಥಳದಲ್ಲಿ ಒಬ್ಬಳೇ ಮಹಿಳೆ ಬಸ್‌ಗೆ ಕಾಯುತ್ತಾ ನಿಂತಿದ್ದರೂ ಬಸ್ ನಿಲ್ಲಿಸಿ, ನಿಗದಿತ ಸ್ಥಳದಲ್ಲಿ ಇಳಿಸಿ, ನಗುಮೊಗದ ಸೇವೆ ನೀಡುತ್ತಿದ್ದಾರೆ. ಹಿರಿಯ ಮಹಿಳೆಯರು ಮತ್ತು ಚಿಕ್ಕ ಮಕ್ಕಳೊಂದಿಗೆ ಸರಕಾರಿ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವುದು ಆರಾಮದಾಯಕವೆನಿಸಿದೆ.’
-ಸೌಮ್ಯ, ಗೃಹಿಣಿ ಉಡುಪಿ.
‘ಸರಕಾರದ ಶಕ್ತಿ ಯೋಜನೆಗೆ ಜಿಲ್ಲೆಯ ಮಹಿಳಾ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕುಂದಾಪುರ ತಾಲೂಕು ಮತ್ತು ಇತರೆ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಂದ ಬೇಡಿಕೆ ಬರುತ್ತಿದೆ. ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಬಸ್‌ಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಹಾಗೂ ಹೊಸ ಮಾರ್ಗಗಗಳಲ್ಲಿ ಸಂಚರಿಸಲು ಅಗತ್ಯವಿರುವ ಪರ್ಮಿಟ್ ನೀಡಲು ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಕೇಂದ್ರ ಕಚೇರಿಯನ್ನು ಕೋರಲಾಗಿದೆ.
-ನಿರ್ಮಲಾ, ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ.