ಶಕ್ತಿ ಯೋಜನೆ ಮಹಿಳೆಯರ ಹಕ್ಕು: ನಾಗರತ್ನ ನಾಡ
ಕುಂದಾಪುರ, ಜೂ.23: ಕುಂದಾಪುರದಿಂದ ತಲ್ಲೂರು -ಹಟ್ಟಿಯಂಗಡಿ -ಗುಡ್ಡಿಯಂಗಡಿ-ಕರ್ಕಿ -ಗುಲ್ವಾಡಿ ಮಾರ್ಗದಲ್ಲಿ ಶೀಘ್ರವೇ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಆಗ್ರಹಿಸಿ ಗುಲ್ವಾಡಿ ಗ್ರಾಮ ಪಂಚಾಯತ್ ಎದುರು ಸಿಪಿಎಂ ಗುಲ್ವಾಡಿ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಇಂದು ಗ್ರಾಮಸ್ಥರು ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಬೈಂದೂರು ವಲಯ ಸಮಿತಿ ಮುಖಂಡರಾದ ನಾಗರತ್ನ ನಾಡ ಮಾತನಾಡಿ, ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಯನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಅವಹೇಳನ ಮಾಡುತ್ತಿರುವುದು ಖಂಡನೀಯವಾಗಿದೆ. ಶಕ್ತಿ ಯೋಜನೆ ಮಹಿಳೆಯರ ಹಕ್ಕು. ಈ ಯೋಜನೆ ಯಶಸ್ಸಿಗೆ ಗ್ರಾಮಸ್ಥರು ಕೆಎಸ್ಸಾರ್ಟಿಸಿ ಬಸ್‌ನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸ್ಥಳೀಯ ಸಮಿತಿ ಕಾರ್ಯದರ್ಶಿ ಜಿ.ಡಿ.ಪಂಜು ಪೂಜಾರಿ ಮಾತನಾಡಿ, ಗುಲ್ವಾಡಿಡ್ಯಾಂನ ಆಸುಪಾಸಿನ ನಿವಾಸಿಗಳಾದ ವಿದ್ಯಾರ್ಥಿಗಳು, ಕಾರ್ಮಿಕರು, ವಯೋವೃದ್ಧರು ಕುಂದಾಪುರ ಪೇಟೆಗೆ ಹೋಗಲು ಮಾವಿನಕಟ್ಟೆ ಮೂಲಕ ಸುಮಾರು 10-12 ಕಿ.ಮೀ ನಡೆದುಕೊಂಡೆ ಹೋಗಿ ಬರಬೇಕಾಗಿದೆ. ಗುಲ್ವಾಡಿ ಗ್ರಾಮದ ಸಾರಿಗೆ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ವೆಂಕಟೇಶ್ ಕೋಣಿ, ಪಕ್ಷದ ಮುಖಂಡ ಚಂದ್ರಶೇಖರ ವಿ., ಶೀಲಾವತಿ ಪಡುಕೋಣೆ, ಸ್ಥಳೀಯ ಸಮಿತಿ ಮುಖಂಡರಾದ ಅಣ್ಣಪ್ಪ ಅಬ್ಬಿಗುಡ್ಡಿ, ನಾಗರಾಜ, ಜಿ.ಬಿ.ಮಹಮ್ಮದ್, ರೆಹಮಾನ್, ನೀಲಾ ಮುಂತಾದವರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಹೆಬ್ಬಾರ್ ಅವರ ಮೂಲಕ ಸಾರಿಗೆ ಪ್ರಾಧಿಕಾರ ಅಧಿಕಾರಿಗೆ ಮನವಿ ನೀಡಲಾಯಿತು.