ಮಂಗಳೂರು: ಜೈನ ಮುನಿ ಹತ್ಯೆಯನ್ನು ಖಂಡಿಸಿ, ಸಮಗ್ರ ತನಿಖೆಗೆ ಆಗ್ರಹಿಸಿ ಜೈನ ಸಮಾಜದ ಮೌನ ಮೆರವಣಿಗೆ

Update: 2023-07-10 14:16 GMT

ಮಂಗಳೂರು: ಹಿರೇಕೊಡಿಯ ನಂದಿ ಪರ್ವತ ಆಶ್ರಮದ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ, ಸಮಗ್ರ ತನಿಖೆಗಾಗಿ ಹಾಗೂ ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಜೈನ ಸಮಾಜ ಬಂಧುಗಳು ಸೋಮವಾರ ಮಂಗಳೂರಿನ ಕ್ಲಾಕ್ ಟವರ್ನಿಂದ ಜಿಲ್ಲಾಧಿಕಾರಿಯವರ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೂಡುಬಿದಿರೆ ಮಠದ ಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ‘‘ಬಂಧಿತ ಕೊಲೆ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಹೊರಬಾರದಂತೆ ಕಠಿಣ ಸಜೆ ವಿಧಿಸಬೇಕು. ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಿ, ಕೂಡಲೇ ಅಪರಾಧಿಗಳಿಗೆ ಸಜೆ ವಿಧಿಸುವಂತೆ ಆಗ್ರಹಿಸಿದರು.

ಶಾಂತಿ, ಸೌಹಾರ್ದತೆಯಿಂದ ದೇಶ ಕಟ್ಟುವ ಕೆಲಸ ಮಾಡುವ ಮುನಿವರ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಎಲ್ಲ ಧಾರ್ಮಿಕ ಶೃದ್ಧಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಿದರೆ ಇಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಅಲ್ಪ ಸಂಖ್ಯಾತ ಇಲಾಖೆಯಿಂದ ಸಿಸಿ ಟಿವಿ ಅಳವಡಿಸಲು ಅನುದಾನ ನೀಡಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ , ಆಶ್ರಮಗಳಿಗೆ ರಕ್ಷಣೆ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿದರು.

ಭಾರತೀಯ ಜೈನ್ ಮಿಲನ್ನ ವಲಯ 8ರ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಧೀಶರನ್ನು ಸರಕಾರ ನೇಮಿಸಬೇಕು.ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಾದ ಜೈನ ಧರ್ಮಿಯರಿಗೆ ಸಾಮಾಜಿಕ ಭದ್ರತೆಯ ಭಯ ಉಂಟಾಗಿದೆ. ಎಲ್ಲ ಧರ್ಮದ ತತ್ವ ಸಿದ್ಧಾಂತಗಳನ್ನು ಗೌರವಿಸುವವರು ಜೈನ ಧರ್ಮಿಯರು. ಜೈನ ಸಮುದಾಯದ ಮುನಿಗಳಿಗೆ , ಬಸದಿಗಳಿಗೆ ಭದ್ರತೆ ಒದಗಿಸಬೇಕು ಎಂದು ಭಾರತೀಯ ಜೈನ್ ಮಿಲನ್ನ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಒತ್ತಾಯಿಸಿದರು.

ಜೈನ್ ಸಮುದಾಯದ ಧುರೀಣರಾದ ಸುರೇಶ್ ಬಲ್ಲಾಳ್, ರತ್ನಾಕರ ಜೈನ್, ಪದ್ಮಶೇಖರ್ ಜೈನ್, ಜಗತ್ಪಾಲ್ ಜೈನ್, ಮಹಾವೀರ್ ಪ್ರಸಾದ್, ಸುಭಾಶ್ಚಂದ್ರ ಜೈನ್ ಬಂಟ್ವಾಳ, ಶ್ವೇತಾ ಜೈನ್ ಮೂಡಬಿದಿರೆ, ಸುದೇಶ್ ಜೈನ್ ಮಕ್ಕಿಮನೆ, ಸುಕುಮಾರ್ ಬಲ್ಲಾಳ್, ವರ್ಧಮಾನ್ ಜೈನ್ ಮಂಗಳೂರು ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News