ಉಳ್ಳಾಲ: ಕಡಲ್ಕೊರೆತ ಪ್ರದೇಶಗಳಿಗೆ ಸ್ಪೀಕರ್ ಯುಟಿ ಖಾದರ್ ಭೇಟಿ

Update: 2023-07-08 12:18 GMT

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಳ್ಳಾಲ ಸೀಗ್ರೌಂಡ್ ನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಘಟನಾ ಸ್ಥಳಕ್ಕೆ ವಿಧಾನ ಸಭಾ ಅಧ್ಯಕ್ಷ ಯುಟಿ ಖಾದರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೀಘ್ರ ತಡೆಗೋಡೆ ಕಾಮಗಾರಿ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಉಳ್ಳಾಲ ತಹಶೀಲ್ದಾರ್, ನಗರಸಭೆ ಪೌರಾಯುಕ್ತ ವಾಣಿ ಆಳ್ವ ಮತ್ತು ಅಧಿಕಾರಿಗಳು ಹಾಜರಿದ್ದರು.

ಬಟ್ಟಪ್ಪಾಡಿಯಲ್ಲಿ ಅಪಾಯದಲ್ಲಿರುವ ಎರಡು ಮನೆಗಳ ಪೈಕಿ ಬೀಪಾತುಮ್ಮ ಅವರು ತಾಯಿ ಮನೆಗೆ ಸ್ಥಳಾಂತರಗೊಂಡಿದ್ದು, ದಯಾವತಿ ಅಣ್ಣನ ಮನೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ. ತೀವ್ರಗೊಂಡ ಕಡಲ್ಕೊರೆತದಿಂದ ಸಮುದ್ರದ ಅಲೆ ಬೀಪಾತುಮ್ಮ ಅವರ ಮನೆಯ ಗೋಡೆಗೆ ಬಡಿಯುವ ಹಂತಕ್ಕೆ ತಲುಪಿದೆ.

ಸೇವಂತಿ ಗುಡ್ಡೆಯಲ್ಲಿ ಜೋಸೆಫ್ ಡಿಸೋಜ ರವರ ಮನೆ ಅಪಾಯದಲ್ಲಿದ್ದು, ಕುಸಿಯುವ ಹಂತದಲ್ಲಿದೆ. ಘಟನಾ ಸ್ಥಳಕ್ಕೆ ವಿಧಾನ ಸಭಾ ಅಧ್ಯಕ್ಷ ಯುಟಿ ಖಾದರ್, ಪೌರಾಯುಕ್ತ ವಾಣಿ ಆಳ್ವ, ಕೌನ್ಸಿಲರ್ ಮುಸ್ತಾಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕುಟುಂಬದ ಮನೆಗೆ ತೆರಳುವುದಾಗಿ ಜೋಸೆಫ್ ಡಿಸೋಜ ನಗರ ಸಭೆ ಅಧಿಕಾರಿಗಳಲ್ಲಿ ತಿಳಿಸಿದ್ದಾರೆ.

ಸೇವಂತಿ ಗುಡ್ಡೆಯಿಂದ ಬೃಹತ್ ಗಾತ್ರದ ಕಲ್ಲು ಉರುಳಿ ರಸ್ತೆಗೆ ಬಿದ್ದ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಶಬ್ದ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ ನಗರ ಸಭೆ ಕೌನ್ಸಿಲರ್ ಮುಸ್ತಾಕ್ ಪಟ್ಲ ಅವರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ರಾತ್ರಿ ವೇಳೆ ಆಗಮಿಸಿದ ಪೌರಾಯುಕ್ತ ವಾಣಿ ಆಳ್ವ, ಕೌನ್ಸಿಲರ್ ಮುಸ್ತಾಕ್ ಪಟ್ಲ ಹಾಗೂ ಪೌರ ಕಾರ್ಮಿಕರು ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ತೆರವುಗೊಳಿಸಿ ತಡೆಯಾಗಿದ್ದ ಸಂಚಾರ ವನ್ನು ಸುಗಮಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News