ಗಣೇಶ ಚತುರ್ಥಿ ಪ್ರಯುಕ್ತ ಕೊಂಕಣ ರೈಲು ಮಾರ್ಗದಲ್ಲಿ ಮುಂಬೈ-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಓಡಾಟ
ಉಡುಪಿ, ಜು.4: ಗಣೇಶ ಚೌತಿಯ ಸಂದರ್ಭದಲ್ಲಿ ಪ್ರಯಾಣಿಕರ ವಿಶೇಷ ನೂಕುನುಗ್ಗಲನ್ನು ನಿಭಾಯಿಸುವ ದೃಷ್ಟಿಯಿಂದ ಸೆಂಟ್ರಲ್ ರೈಲ್ವೆಯ ಸಹಯೋಗ ದೊಂದಿಗೆ ಮುಂದಿನ ಸೆಫ್ಟಂಬರ್ ತಿಂಗಳಲ್ಲಿ ಮುಂಬಯಿ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ನಿಗಮ ನಿರ್ಧರಿಸಿದೆ.
ರೈಲು ನಂ.01165 ಮುಂಬೈ ಲೋಕಮಾನ್ಯ ತಿಲಕ್- ಮಂಗಳೂರು ಜಂಕ್ಷನ್ ವಿಶೇಷ ರೈಲು ಸೆ.15, 16, 17, 18, 22, 23, 29, 30ರಂದು ರಾತ್ರಿ 10:15ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಹೊರಡಲಿದೆ. ಈ ರೈಲು ಮರುದಿನ ಸಂಜೆ 5:20ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ರೀತಿ ರೈಲು ನಂ.01166 ಮಂಗಳೂರು ಜಂಕ್ಷನ್- ಮುಂಬೈ ಲೋಕಮಾನ್ಯ ತಿಲಕ್ ವಿಶೇಷ ರೈಲು ಸೆ.16, 17, 18, 19, 23, 24, 30 ಹಾಗೂ ಅ.1ರಂದು ಸಂಜೆ 6:40ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಿ ಮರುದಿನ ಅಪರಾಹ್ನ 1:35ಕ್ಕೆ ಮುಂಬಯಿ ತಲುಪಲಿದೆ.
ಈ ರೈಲಿಗೆ ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಫ್ಲೂಣ್, ಸರ್ವಾದ, ಸಂಗಮೇಶ್ವರ ರೋಡ್, ರತ್ನಗಿರಿ, ಅಡಾವಳಿ, ರಾಜಪುರ ರೋಡ್, ವೈಭವವಾಡಿ ರೋಡ್, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್‌ಗಳಲ್ಲಿ ನಿಲುಗಡೆ ಇರುತ್ತದೆ.
2ಟಯರ್ ಎಸಿ 1, 3ಟಯರ್ ಎಸಿ 2, ಸ್ಲೀಪರ್ 10 ಕೋಚ್‌ಗಳು ಸೇರಿದಂತೆ ರೈಲು ಒಟ್ಟು 20 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.