ಅನಧಿಕೃತ ಪ್ರಾಣಿ ವಧೆಗೆ ತಡೆ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

Update: 2023-06-26 14:45 GMT

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಲೋಪ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಶನಿವಾರ ವರ್ಚುವಲ್ ಮೂಲಕ ಬಕ್ರೀದ್ ಆಚರಣೆ ಸಂದರ್ಭ ಅನಧಿಕೃತವಾಗಿ ಜಾನುವಾರಗಳ ವಧೆ ಹಾಗೂ ಸಾಗಾಣಿಕೆ ತಡೆಗಟ್ಟಲು ರಚಿಸಿರುವ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅನಧಿಕೃತ ಪ್ರಾಣಿ ವಧೆ ತಡೆಯಲು ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ವಿವಿಧ ತಂಡಗಳನ್ನು ರಚಿಸಿ, ಕಣ್ಗಾವಲು ಇಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು. ಜಿಲ್ಲೆಯಾದ್ಯಂತ ನಿಯೋಜಿಸಲಾದ ಚೆಕ್‌ಪೋಸ್ಟ್ ಗಳಲ್ಲಿ, ಅನಧಿಕೃತವಾಗಿ ಜಾನುವಾರುಗಳು ಸಾಗಾಣಿಕೆ ಆಗದಂತೆ ನಿಗಾ ವಹಿಸಬೇಕು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಬೇಕು ಎಂದರು.

ಅನಧಿಕೃತವಾಗಿ ಜಾನುವಾರುಗಳನ್ನು ವಶಪಡಿಸಿಕೊಂಡಲ್ಲಿ ಅವುಗಳ ರಕ್ಷಣೆಗಾಗಿ ಗುರುತಿಸಲಾದ ಗೋಶಾಲೆಗಳಲ್ಲಿ ಸಂರಕ್ಷಣೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ತರಹದ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ ಹಾಕೆ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್, ನಗರಸಭೆ ಪೌರಾಯುಕ್ತ ರಮೇಶ್ ನಾಯಕ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಂಕರ್ ಶೆಟ್ಟಿ, ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News