ಸಂಘಟನಾತ್ಮಕ ಸೇವೆಯಿಂದ ಸಫಲತೆ ಸಾಧ್ಯ-ಸೊಹೈಬ್ ಮೌಲಾನ

Update: 2023-07-16 16:37 GMT

ಕಾವಳಕಟ್ಟೆ, ಜು.16: ಸಂಘಟನೆ ಕೇವಲ ಹೆಸರಿಗಷ್ಠೇ ಇದ್ದರೆ ಸಾಲದು ಅದು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಆಗ ಮಾತ್ರ ಅದರಲ್ಲಿ ಸಫಲತೆ ಕಾಣಬಹುದು, ತನ್ಮೂಲಕ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಂಗಳೂರು ಮಸೀದಿಯ ಖತೀಬ್ ಸೊಹೈಬ್ ಮೌಲಾನ ಹೇಳಿದರು.

ಹಿದಾಯ ಪೌಂಡೇಷನ್ ವತಿಯಿಂದ ಕಾವಲಕಟ್ಟೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್-2023 ಸಮಾರಂಭದಲ್ಲಿ ಮಾತನಾಡಿ ನಮ್ಮ ಸಮುದಾಯದಲ್ಲಿ ಬಹಳಷ್ಟು ಮಂದಿ ಹೃದಯ ಶ್ರೀಮಂತಿಕೆಯ ದಾನಿಗಳಿದ್ದಾರೆ. ಸಂಘಟನೆಗಳು ಅವರನ್ನು ಬಳಸಿಕೊಂಡು ಸಮುದಾಯದಲ್ಲಿ ಕಾಡುತ್ತಿರುವ ಹಸಿವು, ಶಿಕ್ಷಣ, ಆರೋಗ್ಯ ಸಮಸ್ಯೆಗಳಿಗೆ ಸ್ಪಂಧಿಸುವಂತಾಗಬೇಕು ಎಂದರು.

ಗ್ಲೋಬಲ್ ಮೀಟ್ ಸಂಯೋಜಕ ಝಕರಿಯಾ ಜೋಕಟ್ಟೆ ಮಂಗಳೂರುನಲ್ಲಿ ನಿರ್ಮಾಣವಾಗಲಿರುವ ಎಪಿ ಸೆಂಟರ್‌ನ ಯೋಜನಾ ವಿವರದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಇದರ ಕಟ್ಟಡ ನಿರ್ಮಾಣ ಕಾಮಗಾರಿಗೆ ಈಗಾಗಲೇ ಶಿಲಾನ್ಯಾಸ ನೆರವೇರಿದೆ. ಈ ಯೋಜನೆಯನ್ನು ಶಿಕ್ಷಣ ಮತ್ತು ಸಮುದಾಯದ ಒಳಿತನ್ನು ಕೇಂದ್ರವಾಗಿರಿಸಿಕೊಂಡು ರೂಪಿಸಲಾಗಿದ್ದು, ಸಹೃದಯಿ ದಾನಿಗಳು ಇದಕ್ಕೆ ಕೈಜೋಡಿಸಬೇಕು ಎಂದರು.

ಕೇಂದ್ರ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಮಾತನಾಡಿ, ಹಿದಾಯ ಸಂಸ್ಥೆ ಕಳೆದ 16 ವರ್ಷಗಳಿಂದ ನಿರಂತರವಾಗಿ ಪ್ರತೀ ತಿಂಗಳು 250 ಕುಟುಂಬಕ್ಕೆ ಆಹಾರ ಪೂರೈಕೆ ಮಾಡುತ್ತಿದೆ, ಕಾವಲಕಟ್ಟೆಯಲ್ಲಿ ಹಿದಾಯ ಕಾಲೋನಿಯಲ್ಲಿ 55 ಕುಟುಂಬಗಳಿಗೆ ಮೂಲ ಸೌಕರ್ಯ ವ್ಯವಸ್ಥೆ ಮಾಡಲಾ ಗಿದ್ದು, ಅಲ್ಲಿನ 89 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮತ್ತು 39 ವಿಕಲ ಚೇತನ ವಿದ್ಯಾರ್ಥಿಗಳಿಗೆ ವಿಶೇಷ ಶಾಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವ್ಯವಸ್ಥೆಯನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಮಂಗಳೂರುನ್ನು ಕೇಂದ್ರವಾಗಿರಿಸಿಕೊಂಡು ಎಪಿ ಸೆಂಟರ್ ಯೋಜನೆಯನ್ನು ರೂಪಿಸಲಾಗಿದ್ದು, ಇದರ ನಿರ್ಮಾಣಕ್ಕೆ ಸಹೃದಯಿ ದಾನಿಗಳ ಸಹಕಾರ ಬೇಕಾಗಿದೆ ಎಂದರು.

ಸ್ಥಾಪಕ ಅಧ್ಯಕ್ಷ ಖಾಸಿಂ ಅಹಮದ್, ಟ್ರಸ್ಟಿ ಮುಸ್ತಫಾ, ರಿಯಾದ್ ಘಟಕದ ಮಹಮ್ಮದ್ ಆಲಿ, ಜಿದ್ದಾ ಘಟಕದ ಹಮೀದ್ ಆಲಿ, ದಮಾಮ್‌ನ ಅಮ್ಜದ್ ಖಾನ್, ದುಬೈ ಘಟಕದ ಅಖ್ತರ್ ಹುಸೇನ್, ಜುಬೈಲ್ ಘಟಕದ ದ್ಯಾನಿಶ್, ಯೂತ್ ವಿಂಗ್‌ನ ಝಮೀರ್, ಮಹಿಳಾ ಘಟಕದ ನೌಶಿನ್ ರಬೀಯತ್ ತಮ್ಮ ಘಟಕಗಳ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ವಿವಿಧ ಸಂಘಟನೆಗಳ ರಶೀದ್ ವಿಟ್ಲ, ಅಬೂಬಕ್ಕರ್ ಪುತ್ತ, ಮಹಮ್ಮದ್ ಅಲಿ ಬಂಟ್ವಾಳ, ಪಿ.ಎಸ್. ಅಬ್ದುಲ್ ಹಮೀದ್ ಹಾಜಿ, ಹಂಝ ಬಸ್ತಿಕ್ಕೋಡಿ, ಶಾಹಿದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ಘಟಕದ ಪ್ರಧಾನ ಕಾರ‌್ಯದರ್ಶಿ ಆಬಿದ್ ಅಸ್ಗರ್ ವರದಿ ಮಂಡಿಸಿದರು. ಹಕೀಂ ಕಲಾಯಿ ವಂದಿಸಿದರು. ಕಾರ‌್ಯದರ್ಶಿ ಅಬ್ದುಲ್ ರಜಾಕ್, ಅಬ್ದುಲ್ ಹಮೀದ್ ಕಲ್ಲಡ್ಕ ಕಾರ‌್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News