ಭಾರೀ ಮಳೆಯ ಸಂದರ್ಭ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಅಧಿಕಾರ ತಹಶೀಲ್ದಾರ್, ಬಿಇಓಗೆ: ಉಡುಪಿ ಡಿಸಿ ಕೂರ್ಮಾರಾವ್ ಆದೇಶ
ಉಡುಪಿ, ಜು.4: ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗುತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಮುಂದಿನ ದಿನಗಳಲ್ಲಿ ಮಳೆಯು ಮುಂದುವರಿಯುವ ಸೂಚನೆ ಇರುವುದರಿಂದ ಸ್ಥಳೀಯ ಮಳೆಯ ಪ್ರಮಾಣ, ವಿಪತ್ತು ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಅವಶ್ಯವಿರುವ ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಅವಶ್ಯವೆನಿಸುವ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವ ಅಧಿಕಾರವನ್ನು ತಾಲೂಕು ತಹಶೀಲ್ದಾರ್‌ರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ನೀಡುವ ಅದೇಶ ವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಇಂದು ಹೊರಡಿಸಿದ್ದಾರೆ.
ಅವಶ್ಯಕ ಸಂದರ್ಭಗಳಲ್ಲಿ ನೀಡುವ ರಜೆಗಳಿಗೆ ಸಂಬಂಧಿಸಿದಂತೆ ಘಟನೋತ್ತರ ಮಂಜೂರಾತಿಗಾಗಿ ತಮ್ಮ ಕಚೇರಿಗೆ ಸಲ್ಲಿಸುವಂತೆಯೂ ಅವರು ಆದೇಶದಲ್ಲಿ ತಿಳಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ವಿಪತ್ತು ನಿರ್ವಹಣಾ- 2005 ಕಾಯ್ದೆಯ ಕಲಂ 26,30,34ರಡಿ ರಜೆಯನ್ನು ತಹಶೀಲ್ದಾರ್ ಹಾಗೂ ಬಿಇಓ ಘೋಷಿಸಬಹುದು ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ಅವಶ್ಯಕ ಸಂದರ್ಭಗಳಲ್ಲಿ ನೀಡುವ ರಜೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ಸೂಚನೆಗಳನ್ನು ಸಹ ಅವರು ನೀಡಿದ್ದಾರೆ. ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಪ್ರವಚನ ನಡೆಸುವಾಗ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ನಿರ್ಣಯಿಸುವಂತೆ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಿತರಿಗೆ ಸೂಚನೆಗಳನ್ನೂ ನೀಡಲಾಗಿದೆ.
*ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ. *ಕಠಿಣವಾದ ದಾರಿ ಎಂದರೆ ತೋಡು, ಹಳ್ಳಗಳನ್ನು ದಾಟಿ ಬರುವ ಸಂದರ್ಭಗಳು ಇರುವ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸುರಕ್ಷಿತ ವಾಗಿ ಇರುವಂತೆ ಸೂಚನೆಗಳನ್ನು ನೀಡಬೇಕು.
*ದುರ್ಬಲ/ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. *ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೆರೆ ಪೀಡಿತ ಪ್ರದೇಶಗಳಲ್ಲಿದ್ದು, ಬರುವುದು ಕಷ್ಟಸಾಧ್ಯ ಎನ್ನುವ ಸಂದರ್ಭದಲ್ಲಿ ಸ್ಥಳೀಯವಾಗಿ ರಜೆಯನ್ನು ಘೋಷಿಸಲು ಅವಕಾಶ ಕಲ್ಪಿಸಲಾಗಿದೆ.
*ಮಳೆಗಾಗಿ ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯವನ್ನು ಶನಿವಾರ ಅಪರಾಹ್ನ ಹಾಗೂ ರವಿವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸುವಂತೆ ತಿಳಿಸಲಾಗಿದೆ.
*ಮಕ್ಕಳ ಪೋಷಕರು/ಶಾಲಾ ಮುಖ್ಯಸ್ಥರು, ಮಕ್ಕಳು ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಹಾಗೂ ಸಮುದ್ರ ತೀರಗಳಿಗೆ ಹೋಗದಂತೆ ಜಾಗೃತಿ ವಹಿಸಬೇಕು.* ಮಕ್ಕಳು ಶಾಲೆಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳಬೇಕು. *ಶಾಲೆಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು.
ತುರ್ತು ಸೇವೆಗೆ ಟೋಲ್‌ಫ್ರಿ ಸಂಖ್ಯೆ:1077, ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್‌ರೂಂ ನಂ.:0820-2574802.