ಜು.13, 14ರಂದು ಮಂಗಳೂರಿನಲ್ಲಿ ಐಸಿಎಐ ವತಿಯಿಂದ ‘ತೆರಿಗೆ ಕ್ಲಿನಿಕ್’
ಮಂಗಳೂರು, ಜು.11: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಇದರ 75ನೇ ವರ್ಷಾಚರಣೆ ಸಲುವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರ ಮಹತ್ವದ ಕುರಿತು ತೆರಿಗೆದಾರರಲ್ಲಿ ಅರಿವು ಮೂಡಿಸಲು ಮತ್ತು ರಿಟರ್ನ್ಸ್ ಸಲ್ಲಿಸುವಲ್ಲಿ ತೆರಿಗೆದಾರರ ಪ್ರಶ್ನೆಗಳು ಅಥವಾ ಅಸ್ಪಷ್ಟತೆಗಳನ್ನು ಪರಿಹರಿಸಲು ಜು.13 ಮತ್ತು 14ರಂದು ಮಂಗಳೂರಿನಲ್ಲಿ ‘ತೆರಿಗೆ ಕ್ಲಿನಿಕ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಸಿಎ ಗೌತಮ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮಂಗಳೂರಿನ ಕೆ.ಆರ್.ರಾವ್ ರಸ್ತೆಯ ಮಹೇಂದ್ರ ಆರ್ಕೇಡ್‌ನ 2ನೇ ಮಹಡಿಯಲ್ಲಿರುವ ಐಸಿಎಐ ಭವನದಲ್ಲಿ ಬೆಳಗ್ಗೆ 11ರಿಂದ ಸಂಜೆ 6 ಗಂಟೆ ವರೆಗೆ ತೆರಿಗೆ ಕ್ಲಿನಿಕ್ ಎರಡು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಜು.13ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದ್ದು, ಮಂಗಳೂರಿನ ಆದಾಯ ತೆರಿಗೆ ಆಯುಕ್ತ ಎಸ್.ರಂಗರಾಜನ್ ಮತ್ತು ಆದಾಯ ತೆರಿಗೆ ಹೆಚ್ಚುವರಿ ಆಯುಕ್ತ ಶಂಕರ ಗಣೇಶ್ ಕುರುಪ್ಪಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ಏಕಕಾಲದಲ್ಲಿ ಐಸಿಎಐ ತನ್ನ 168 ಶಾಖೆ ಮತ್ತು ಐದು ಪ್ರಾದೇಶಿಕ ಕೌನ್ಸಿಲ್‌ಗಳ ಮೂಲಕ ದೇಶಾದ್ಯಂತ ಆಯೋಜಿಸುತ್ತಿದೆ ಎಂದು ಮಾಹಿತಿ ನೀಡಿದರು.
ತೆರಿಗೆ ಆಧಾರದ ಹೆಚ್ಚಳ, ಇತರೆ ಪ್ರಶ್ನೆಗಳಿಗೆ, ಸುಗಮ ಫೈಲಿಂಗ್‌ಗೆ ಈ ತೆರಿಗೆ ಕ್ಲಿನಿಕ್ ನೆರವಾಗಲಿದೆ. ಈ ಕಾರ್ಯಕ್ರಮದಲ್ಲಿ ತೆರಿಗೆ ಪಾವತಿದಾರರಿಗೆ ತೆರಿಗೆ ಪಾವತಿ ಕ್ರಮದ ಬಗ್ಗೆ ಲಿಖಿತವಾಗಿಯೂ ಹೇಳಿಕೊಡಲಾಗುತ್ತದೆ. ಇದರಿಂದ ಸ್ವಯಂ ಆಗಿಯೂ ತೆರಿಗೆ ಪಾವತಿದಾರರು ತೆರಿಗೆ ಪಾವತಿಸಲು ಸಾಧ್ಯವಾಗಲಿದೆ. ಅಲ್ಲದೆ ತೆರಿಗೆ ಪಾವತಿ ಕುರಿತ ಗೊಂದಲ, ಸಂಶಯಗಳನ್ನಬು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಐಸಿಎಐಯ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ಉಪಾಧ್ಯಕ್ಷ ಸಿಎ ಗೌತಮ್ ಪೈ ಡಿ , ಖಜಾಂಚಿ ಸಿಎ ಡೇನಿಯಲ್ ಮಾರ್ಷ್ ಪಿರೇರಾ, ಸಿಕಸಾ ಮಂಗಳೂರು ಶಾಖಾ ಅಧ್ಯಕ್ಷೆ ಸಿಎ ಮಮತಾ ರಾವ್ ಉಪಸ್ಥಿತರಿದ್ದರು.