23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕುಂದಾಪುರ, ಜು.7: ಕಳೆದ 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜಾರಾಗದೇ ಗೋವಾ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಬೈಕ್ ಕಳವು ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಲ್ಪೆ ತೋನ್ಸೆ ಮೂಲದ ಪ್ರಸ್ತುತ ಗೋವಾದಲ್ಲಿ ವಾಸವಿರುವ ಶಬ್ಬೀರ್ (59) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: ಆರೋಪಿ ಶಬ್ಬೀರ್ ಮೇಲೆ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ 2000ನೇ ಇಸವಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದ ಆರೋಪ ವಿದ್ದು ಆತ ನ್ಯಾಯಾಲಯಕ್ಕೆ ಹಾಜಾರಾಗದೇ ಗೋವಾದಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಆತನ ಊರಾದ ಮಲ್ಪೆ ತೋನ್ಸೆಗೆ ಬಂದ ಬಗ್ಗೆ ಖಚಿತ ವರ್ತಮಾನ ಪಡೆದ ಪೊಲೀಸರು ಜೂ.6 ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣೆ ನಿರೀಕ್ಷಕ ಯು.ಬಿ ನಂದಕುಮಾರ್ ನೇತೃತ್ವದಲ್ಲಿ ನಗರ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ವಿನಯ ಕೊರ್ಲಹಳ್ಳಿ, ತನಿಖಾ ವಿಭಾಗದ ಪಿಎಸ್‌ಐ ಪ್ರಸಾದ್ ಕುಮಾರ್, ಹೆಡ್ ಕಾನ್‌ಸ್ಟೇಬಲ್‌ಗಳಾದ ಸಂತೋಷ್ ಪೂಜಾರಿ, ಸಂತೋಷ್ ಕೆ., ಸಿಬ್ಬಂದಿಗಳಾದ ಶ್ರೀಧರ, ರಾಮ ಪೂಜಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.