ಉಡುಪಿಯಲ್ಲೂ ನೂರರ ಗಟಿ ದಾಟಿದ ಟೊಮೆಟೊ ದರ !
ಉಡುಪಿ, ಜೂ.27: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಟೊಮೆಟೊ, ಕೊತ್ತಂಬರಿ ಸೊಪ್ಪು, ಕಾಯಿಮೆಣಸು ಬೆಲೆ ನೂರರ ಗಟಿ ದಾಟಿದೆ.
ಜೂ.23ರಂದು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40-50ರೂ. ಇದ್ದ ಟೊಮೆಟೊ ಕೆ.ಜಿ ಒಂದರ ದರ ರವಿವಾರ ದಢೀರನೇ 90-100ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಸಾಮಾನ್ಯ ವಾಗಿ ಕೆ.ಜಿ.ಗೆ 40-50ರೂ. ಇದ್ದ ಕೊತ್ತಂಬರಿ ಸೊಪ್ಪಿನ ದರ ಇದೀಗ ಕೆ.ಜಿ.ಗೆ 120ರೂ. ಆಗಿದೆ. ಮಳೆಗಾಲದಲ್ಲಿ ಯಾವುದೇ ಶುಭ ಕಾರ್ಯಗಳು ಇಲ್ಲದ ಕಾರಣ ಸಾಮಾನ್ಯವಾಗಿ ಕೊತ್ತಂಬರಿ ಸೊಪ್ಪಿನ ದರ ಕಡಿಮೆಯೇ ಇರುತ್ತದೆ. ಆದರೆ ಮಳೆಗಾಲದಲ್ಲೂ ಕೊತ್ತಂಬರಿ ಸೊಪ್ಪಿನ ದರ ನೂರರ ಗಟಿ ದಾಟಿರುವುದು ಗ್ರಾಹಕರಿಗೆ ಬರೆ ಎಳೆದಂತಾಗಿದೆ.
ಕಳೆದ ಎರಡು ಮೂರು ವರ್ಷಗಳಿಂದ ಕೆ.ಜಿ.ಗೆ 40ರೂ. ದರ ಇದ್ದ ಶುಂಠಿಗೆ ಕಳೆದ ಒಂದು ತಿಂಗಳಿನಿಂದ ಕೆ.ಜಿ.ಗೆ 240ರೂ. ಆಗಿದೆ. ವರ್ಷ ಇಡೀ ಕಾಯಿ ಮೆಣಸು ದರ ಸಾಮಾನ್ಯವಾಗಿ ಕೆ.ಜಿ.ಗೆ 40-50ರೂ. ಇರುತ್ತದೆ. ಆದರೆ ಈ ಬಾರಿ ಕೆ.ಜಿ. 100ರೂ. ಏರಿಕೆಯಾಗಿರುವುದು ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಅದೇ ರೀತಿ ಬೀನ್ಸ್ ಕೆ.ಜಿ.ಗೆ 100ರೂ.(ಹಿಂದಿನ ದರ 50-60ರೂ.), ಸುವರ್ಣ ಗೆಡ್ಡೆ ಕೆ.ಜಿ.ಗೆ 80ರೂ.(ಹಿಂದಿನ ದರ 30-40ರೂ.), ಬಿಟ್ರೋಟ್ ಕೆ.ಜಿ.ಗೆ 60ರೂ. ಏರಿಕೆಯಾಗಿದೆ ಎಂದು ಉಡುಪಿಯ ತರಕಾರಿ ವ್ಯಾಪಾರಿ ಶಫೀಕ್ ತಿಳಿಸಿದ್ದಾರೆ.
‘ಈ ಬಾರಿ ಮುಂಗಾರು ಮಳೆ ಬಾರದ ಕಾರಣ ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ತರಕಾರಿ ಇಳುವರಿ ಕಡಿಮೆಯಾಗಿದೆ. ಇದರಿಂದ ನಮಗೆ ತರಕಾರಿಗಳು ಪೂರೈಕೆ ಆಗುತ್ತಿಲ್ಲ. ಉಡುಪಿಗೆ ಹೆಚ್ಚಾಗಿ ಎಲ್ಲ ತರಕಾರಿಗಳು ಚಿಕ್ಕಮಗಳೂರು ಜಿಲ್ಲೆಯಿಂದ ಬರುತ್ತದೆ ಈಗ ಅಲ್ಲೇ ಟೊಮೊಟೆ ಕೆ.ಜಿ.ಗೆ 100ರೂ. ಆಗಿದೆ. ಈಗ ನಾವು ಕೋಲಾರ, ನಾಸಿಕ್, ಪೂನಾದಿಂದ ಟೊಮೆಟೊ ತರಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ಸಗಟು(ವೋಲ್‌ಸೇಲ್) ವ್ಯಾಪಾರದಲ್ಲಿ ಟೊಮೆಟೊ ಕೆ.ಜಿ.ಗೆ 76ರೂ.- 80ರೂ.ನಿಂದ ಬರುತ್ತಿದೆ. ಮೊದಲು ಕೆ.ಜಿ.ಗೆ 25-30ರೂ. ಸಿಗುತ್ತಿತ್ತು. ನಾವು ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಶಿವಮೊಗ್ಗ, ಹಾಸನದಿಂದ ಟೋಮೊಟೋ ಮತ್ತು ತರಕಾರಿ ಬರುತ್ತದೆ. ಈಗ ಮಳೆ ಇಲ್ಲದೆ ಮಾಲು ಇಲ್ಲ. ಹಾಗಾಗಿ ದರ ಏರಿಕೆಯಾಗಿದೆ’
-ಪ್ರಕಾಶ್ ಸಜ್ಜನ್, ಸಗಟು ವ್ಯಾಪಾರಿ, ಆದಿಉಡುಪಿ
"ಸಾಮಾನ್ಯವಾಗಿ ಎಲ್ಲ ರೀತಿಯ ತರಕಾರಿಗಳಿಗೆ ಕೆ.ಜಿ.ಗೆ 30-50ರೂ. ಇರುತ್ತದೆ. ಆದರೆ ಇದೀಗ ಮಳೆಯ ಕೊರತೆಯಿಂದ ಕೆಲವು ತರಕಾರಿ ದರ ನೂರರ ಗಡಿ ದಾಟಿದೆ. ಆದರೆ ನೀರುಳ್ಳಿ ಕೆ.ಜಿ.ಗೆ 20-22ರೂ. ಮತ್ತು ಬಟಾಟೆ ಕೆ.ಜಿ. 25-30ರೂ. ಸ್ಥಿರವಾಗಿದೆ. ಸದ್ಯ ಮಳೆಗಾಲದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ ನಮಗೆ ವ್ಯಾಪಾರ ಕೂಡ ಕಡಿಮೆ ಇರುತ್ತದೆ. ಇದೀಗ ಬೆಲೆ ಕೂಡ ಏರಿಕೆಯಾಗಿರುವುದರಿಂದ ಗ್ರಾಹಕರು ತರಕಾರಿ ಖರೀದಿಸುವಾಗ ಹಿಂದೆ ಮುಂದೆ ನೋಡುತ್ತಾರೆ. ಹಾಗಾಗಿ ವ್ಯಾಪಾರ ತುಂಬಾ ಕಡಿಮೆ ಆಗಿದೆ".
-ಶಫೀಕ್, ತರಕಾರಿ ವ್ಯಾಪಾರಿ, ಉಡುಪಿ