‘ಎಪಿಎಂಸಿ ನಿವೇಶನ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ’

Update: 2023-06-26 16:19 GMT
ಸಾಂದರ್ಭಿಕ ಚಿತ್ರ

ಉಡುಪಿ, ಜೂ.26: ಉಡುಪಿ ಎಪಿಎಂಸಿ ಮಾರುಕಟ್ಟೆ ನಿವೇಶನ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವನ್ನೂ ಪಾರದರ್ಶಕ ವಾಗಿ, ನಿಯಮಾನುಸಾರ ನಡೆದಿದೆ ಎಂದು ಆದಿ ಉಡುಪಿಯಲ್ಲಿರುವ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಹಣ್ಣು, ತರಕಾರಿ ಮತ್ತು ದಿನಸಿ ವರ್ತಕರ ಸಂಘ ಸ್ಪಷ್ಟಪಡಿಸಿದೆ.

ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಘಟನಾ ಕಾರ್ಯದರ್ಶಿ ಅಚ್ಯುತ ಪೈ, ಎಪಿಎಂಸಿಯಲ್ಲಿ ಸಾಮಾನ್ಯ ನಿವೇಶನ ಹಂಚಿಕೆಯ ವೇಳೆ ಅರ್ಹ ವರ್ತಕರಿಂದ ಅರ್ಜಿಯನ್ನು ಆಹ್ವಾನಿಸಿ, ಸಮಿತಿಯ ಅಧಿಕಾರಿಗಳು ನಿಯಮಾನುಸಾರ ಅರ್ಜಿಯನ್ನು ಪರಿಶೀಲಿಸಿ ಕಾಯ್ದೆ ಯಂತೆ ಜೇಷ್ಠತೆಯ ಆಧಾರದ ಮೇಲೆ ಆಯ್ಕೆ ಮಾಡಿ ಬೆಂಗಳೂರು ಎಪಿಎಂಸಿಗೆ ಕಳುಹಿಸಿದ್ದು, ನಿರ್ದೇಶಕರ ಅನುಮೋದನೆಯೊಂದಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದರು.

ಇದರಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ಎಲ್ಲಾ ವ್ಯವಹಾರಗಳು ಡಿಡಿ ಮುಖಾಂತರ ನಡೆದಿದ್ದು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದು ಕೊಳ್ಳಲಾಗಿದೆ ಎಂದರು. ಎಪಿಎಂಸಿಯ 14 ನಿವೇಶನಗಳಿಗೆ 23 ವರ್ತಕರು ಅರ್ಜಿ ಸಲ್ಲಿಸಇದ್ದು, ಅದರಲ್ಲಿ ನಿಯಮಾನುಸಾರ ಜೇಷ್ಠತೆಯ ಆಧಾರದ ಮೇಲೆ 11 ಜನ ವರ್ತಕರು ಹಂಚಿಕೆಯನ್ನು ಪಡೆದಿದ್ದಾರೆ. ಮೂರು ನಿವೇಶನ ಗಳಿಗೆ ಬೇಡಿಕೆ ಇಲ್ಲದೇ ಖಾಲಿ ಇವೆ ಎಂದು ಅವರು ವಿವರಿಸಿದರು.

ನಿವೇಶನ ಹಂಚಿಕೆ ಸ್ಥಳ ಎಪಿಎಂಸಿ ಸಮಿತಿ ಖರೀದಿಸಿದ ಜಾಗವಾಗಿದ್ದು, ಸರಕಾರಿ ಜಾಗವಾಗಿರುವುದಿಲ್ಲ. ಹಂಚಿಕೆ ಪಡೆದ ವರ್ತಕರು ನಿಗದಿತ ಹಣವನ್ನು ಡಿಡಿ ರೂಪದಲ್ಲಿ ಮಾತ್ರ ನೀಡಿದ್ದಾರೆ. ಯಾವುದೇ ಹಣವನ್ನು ನಗದು ರೂಪದಲ್ಲಾಗಲೀ, ಸಮಿತಿಯ ಸದಸ್ಯರಿಗೆ ಹೆಚ್ಚುವರಿ ಹಣವಾಗಲಿ ನೀಡಿಲ್ಲ ಎಂದು ಅಚ್ಚುತ ಪೈ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಸತೀಶ್ ನಾಯಕ್, ಕಾರ್ಯದರ್ಶಿ ಮನ್ಸೂರ್, ಉಪಾಧ್ಯಕ್ಷ ಸಮೀಯುಲ್ಲಾ, ಕೋಶಾಧಿಕಾರಿ ಗಣೇಶ್ ಕೆ. ಕೋಟೇಶ್ವರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News