ಚಾರ್ಮಾಡಿ: ನಿಯಂತ್ರಣ ಕಳೆದುಕೊಂಡ ಮೂರು ವಾಹನಗಳು ಪಲ್ಟಿ

Update: 2023-07-02 15:54 GMT

ಬೆಳ್ತಂಗಡಿ: ಚಾರ್ಮಾಡಿ ಪೇಟೆ ಹಾಗೂ ಚಾರ್ಮಾಡಿ ಘಾಟಿ ಪರಿಸರದಲ್ಲಿ ಒಟ್ಟು ಮೂರು ವಾಹನಗಳು ಮಗುಚಿ ಬಿದ್ದ ಘಟನೆ ರವಿವಾರ ಸಂಜೆ ನಡೆದಿದೆ.

ಉಜಿರೆಯಿಂದ ಮೂಡಿಗೆರೆ ಕಡೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿಪೇಟೆಯ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ. ಇಲ್ಲಿನ ಸುಮಾರು 3 ಕಿಮೀ ವ್ಯಾಪ್ತಿಯ ರಸ್ತೆ ಮಳೆಗಾಲದಲ್ಲಿ ವಿಪರೀತ ಜಾರುವುದರಿಂದ ಹಲವಾರು ಅಪಘಾತಗಳು ಈಗಾಗಲೇ ನಡೆದಿವೆ. ಮಳೆ ಬಂದರೆ ಇಲ್ಲಿ ವಾಹನಗಳು ಉರುಳಿ ಬೀಳುವುದು ಸಾಮಾನ್ಯವಾಗಿದೆ. ಇದಕ್ಕೆ ಇಲ್ಲಿನ 3 ಕಿಮೀ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಯವಾದ ಡಾಮರೀಕರಣ ಮಾಡಿರುವುದು ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ರವಿವಾರ ಸಂಜೆಯೂ ಉತ್ತಮ ಮಳೆ ಇದ್ದು ರಸ್ತೆ ಜಾರುತ್ತಿದ್ದ ಕಾರಣದಿಂದ ಚಾಲಕರ ನಿಯಂತ್ರಣಕ್ಕೆ ಸಿಗದ ಈ ಎರಡು ವಾಹನಗಳು ಉರುಳಿ ಬಿದ್ದವು. ವಾಹನಗಳಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಬಂದ ಸ್ಥಳೀಯರಿಗೂ ರಸ್ತೆ ಜಾರುವುದರಿಂದ ಕಾರ್ಯಾಚರಣೆ ನಡೆಸಲು ಕಷ್ಟವಾಯಿತು.

ಈ ರಸ್ತೆಯ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಬದಲಿ ಡಾಮರಿಕರಣ ಮಾಡುವ ಬಗ್ಗೆ ಕಳೆದ ಮೂರು ವರ್ಷಗಳಿಂದ ಸ್ಥಳೀಯರು ಮನವಿ ಮಾಡುತ್ತಿದ್ದಾರೆ ಆದರೆ ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಇದರಿಂದ ಬೇಸತ್ತ ಇಲ್ಲಿಯ ಮಂದಿ ತಕ್ಷಣ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆ ನಡೆಸಲು ಮುಂದಾಗುವುದಾಗಿ ತಿಳಿಸಿದ್ದಾರೆ.

-ಘಾಟಿಯಲ್ಲಿ ಕಾರು ಪಲ್ಟಿ -

ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಬಳಿಕ ರಸ್ತೆಯಲ್ಲಿ ಬೆಂಗಳೂರು ಮೂಲದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆಯು ನಡೆದಿದೆ.

ಮೂರು ಅಪಘಾತಗಳಲ್ಲಿ ವಾಹನಗಳಿಗೆ ಹಾನಿಯಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ತಿಳಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News