ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ವ್ಯವಸ್ಥಿತ ಸಿದ್ಧತೆಗೆ ಉಡುಪಿ ಎಡಿಸಿ ಸೂಚನೆ

Update: 2023-07-12 14:22 GMT

ಉಡುಪಿ, ಜು.12: ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಯು ಜುಲೈ 17 ರಿಂದ 25ರವರೆಗೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸು ವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ತಿಳಿಸಿದ್ದಾರೆ.

ಬುಧವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸೇನಾ ನೇಮಕಾತಿ ರ‍್ಯಾಲಿಗೆ ಈಗಾಗಲೇ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿ ಕೊಂಡಿ ರುವ ಬಾಗಲಕೋಟೆ, ಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ರ್ಯಾಲಿಗೆ ಇದುವರೆಗೆ 6,800ಕ್ಕೂ ಅಧಿಕ ಮಂದಿ ಹೆಸರು ನೊಂದಣಿ ಮಾಡಿ ಕೊಂಡಿದ್ದಾರೆ ಎಂದರು.

ನೇಮಕಾತಿ ರ‍್ಯಾಲಿಗೆ ಪ್ರತಿದಿನ ಸುಮಾರು 1000 ಮಂದಿ ಆಗಮಿಸಲಿದ್ದು, ಇವರಿಗೆ ಮೂಲಭೂತ ಅವಶ್ಯಕತೆಯಾಗಿ ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕ್ರೀಡಾಂಗಣದ ಸುತ್ತಲೂ ಸ್ಚಚ್ಛತೆಯನ್ನು ಕಾಪಾಡಲು ಸಾಕಷ್ಟು ಸಂಖ್ಯೆಯ ಮೊಬೈಲ್ ಟಾಯ್ಲೆಟ್‌ಗಳ ವ್ಯವಸ್ಥೆಯನ್ನು ಮಾಡು ವುದರ ಮೂಲಕ ಸ್ವಚ್ಛತೆಗೆ ಅತ್ಯಂತ ಗರಿಷ್ಠ ಆದ್ಯತೆಯನ್ನು ನೀಡಬೇಕು. ಪ್ರತಿದಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸುವಂತೆ ಉಡುಪಿ ನಗರಸಭೆಯ ಪೌರಾ ಯುಕ್ತರಿಗೆ ಎಡಿಸಿ ಸೂಚನೆ ನೀಡಿದರು.

ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಯಾಗ ದಂತೆ ಮತ್ತು ರಾತ್ರಿ ವೇಳೆಯಲ್ಲಿ ರಸ್ತೆ ಬದಿಗಳಲ್ಲಿ ಅಭ್ಯರ್ಥಿಗಳು ಮಲಗದಂತೆ, ಕ್ರೀಡಾಂಗಣ ಸುತ್ತಮುತ್ತ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸುವಂತೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಮೆಸ್ಕಾಂ ವತಿಯಿಂದ ರ‍್ಯಾಲಿ ನಡೆಯುವ ಕ್ರೀಡಾಂಗಣಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮತ್ತು ಅಪಾಯಕಾರಿ ಮರದ ಕೊಂಬೆಗಳು ಮತ್ತು ವಿದ್ಯುತ್ ತಂತಿಗಳಿದ್ದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಬಿಎಸ್ಸೆನ್ನೆಲ್ ವತಿಯಿಂದ ಸೇನಾ ಕಾರ್ಯಗಳನ್ನು ನಿರ್ವಹಿಸಲು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.

ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆ ಯನ್ನು ಪರಿಶೀಲನೆ ನಡೆಸಲು ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿ ಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ರ್ಯಾಲಿ ನಡೆಯುವ ಸ್ಥಳದಲ್ಲಿ ತುರ್ತು ಆರೋಗ್ಯ ಸಹಾಯಕ್ಕಾಗಿ ಆಂಬುಲೆನ್ಸ್ ಒಳಗೊಂಡ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.

ಈ ನೇಮಕಾತಿ ರ‍್ಯಾಲಿಗೆ ಸಂಬಂಧಿಸಿದಂತೆ ಎಪ್ರಿಲ್ 17ರಿಂದ ನೊಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಅಗ್ನೀರ್ ಜನರಲ್ ಡ್ಯೂಟಿ, ಅಗ್ನೀರ್ ಟೆಕ್ನಿಕಲ್, ಅಗ್ನೀರ್ ಟ್ರೇಡ್ಸ್‌ಮೆನ್, ಅಗ್ನೀರ್ ಕ್ಲರ್ಕ್/ಸ್ಟೋರ್‌ಕೀಪರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರಗಳನ್ನು ಈಮೇಲ್ ಮೂಲಕ ಕಳುಹಿಸಲಾಗಿದೆ.

ಸಭೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ನಗರಸಭೆಯ ಪೌರಾಯುಕ್ತ ರಾಯಪ್ಪ, ಡಿಹೆಚ್‌ಓ ಡಾ.ನಾಗಭೂಷಣ ಉಡುಪ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News