ಉಡುಪಿ: ಜು. 14ರಿಂದ ಪಡಿತರ ಚೀಟಿದಾರರು ಬ್ಯಾಂಕ್ ಖಾತೆ ತೆರೆಯಲು ಶಿಬಿರ

Update: 2023-07-13 15:41 GMT
ಸಾಂದರ್ಭಿಕ ಚಿತ್ರ

ಉಡುಪಿ : ರಾಜ್ಯ ಸರಕಾರದ ಆದೇಶದಂತೆ ಅಂತ್ಯೋದಯ (ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಸದಸ್ಯರು) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರಕಾರದ ವತಿಯಿಂದ ಹೆಚ್ಚುವರಿ ೫ ಕೆ.ಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ ೧೦ ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರಕಾರ ನಿರ್ಧರಿಸಿದೆ.

ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್‌ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ೫ ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ.೩೪ ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಲಾಗುತ್ತದೆ.

ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರ ಹೆಸರು ನಮೂದಾಗಿರಬೇಕು. ಕುಟುಂಬದ ಮುಖ್ಯಸ್ಥರು ನಿಧನ ಹೊಂದಿದ್ದಲ್ಲಿ, ಸಂಬಂಧ ಪಟ್ಟ ತಾಲೂಕಿನ ಆಹಾರ ಶಾಖೆಗೆ ಭೇಟಿ ನೀಡಿ, ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಿ, ಇ-ಕೆವೈಸಿ ಮೂಲಕ ಕುಟುಂಬದ ಮುಖ್ಯಸ್ಥ ರನ್ನು ನಮೂದು ಮಾಡಿಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶವಿರುವುದಿಲ್ಲ.

ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿದ್ದು, ಪಡಿತರ ಚೀಟಿದಾರರು ಮಾಹಿತಿಯನ್ನು ಪಡೆದು ಕೂಡಲೇ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ/ಚಾಲ್ತಿಗೊಳಿಸುವ ಬಗ್ಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಜುಲೈ 2023 ತಿಂಗಳ ನಗದು ವರ್ಗಾವಣೆ ಆಗುವುದಿಲ್ಲ.

ಈ ಫಲಾನುಭವಿಗಳು ೨೦೨೩ರ ಜುಲೈ ೨೦ರ ಒಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಗೊಳಿಸಿದಲ್ಲಿ ಅಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಪಡಿತರ ಚೀಟಿದಾರರು ನೇರ ನಗದು ವರ್ಗಾವಣೆ ಪ್ರಯೋಜನ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಪಡಿತರ ಚೀಟಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಬ್ಯಾಂಕ್ ಖಾತೆ ತೆರೆಯುವ ಸಂಬಂಧ ಕ್ರಮವಹಿಸಲಿದ್ದು, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಶಿಬಿರವನ್ನು ನಡೆಸಿ ಸದ್ರಿ ಫಲಾನುಭವಿ ಗಳಿಗೆ ಆ ಕೂಡಲೇ ಬ್ಯಾಂಕ್ ಅಕೌಂಟ್ ತೆರೆದು ನೀಡುವರು. ಈ ಸಂಬಂಧ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಓಟಿಪಿ ಸ್ವೀಕರಿಸಬೇಕಾದ ಮೊಬೈಲ್, ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಈ ಕೆಳಕಂಡ ತಾಲೂಕುಗಳಲ್ಲಿ ನಿಗದಿತ ದಿನಾಂಕಗಳಂದು ಶಿಬಿರ ಆಯೋಜಿಸಲಾಗುವುದು.

ಉಡುಪಿ ತಾಲೂಕಿನಲ್ಲಿ ಜುಲೈ ೧೪ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಕಚೇರಿ, ಜು.೧೮ ರಂದು ಉದ್ಯಾವರ ಗ್ರಾಪಂ ಕಚೇರಿ, ಜು. ೧೯ರಂದು ಉಡುಪಿ ತಾಲೂಕು ಕಚೇರಿಯ ಆಹಾರ ಶಾಖೆ, ಜು.೨೦ ರಂದು ಕಲ್ಯಾಣಪುರ ಗ್ರಾಪಂ ಕಚೇರಿ ಹಾಗೂ ಮಲ್ಪೆ ಅಂಚೆ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು. ಕಾಪು ತಾಲೂಕಿಗೆ ಸಂಬಂಧಿಸಿದಂತೆ ಜು.೧೫ರಂದು ಕಾಪು ಅಂಚೆ ಕಚೇರಿ, ಜು.೧೭ರಂದು ಕಟಪಾಡಿ ಗ್ರಾಪಂ, ಜು.೨೦ರಂದು ಶಿರ್ವ ಅಂಚೆ ಕಚೇರಿ ಹಾಗೂ ಪಡುಬಿದ್ರೆ ಗ್ರಾಪಂ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

ಬ್ರಹ್ಮಾವರ ತಾಲೂಕಿನಲ್ಲಿ ಜು.೧೪ರಂದು ಮಂದಾರ್ತಿ ಅಂಚೆ ಕಚೇರಿ, ಜು.೧೭ರಂದು ಬ್ರಹ್ಮಾವರ ಅಂಚೆ ಕಚೇರಿ ಹಾಗೂ ಜು.೧೮ರಂದು ಕೋಟಾ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ. ಕುಂದಾಪುರ ತಾಲೂಕಿನಲ್ಲಿ ಜು. ೧೫ರಂದು ಸಿದ್ಧಾಪುರ ಗ್ರಾಪಂ, ಜು.೧೯ರಂದು ಹಾಲಾಡಿ ಗ್ರಾಪಂ ಕಚೇರಿ ಹಾಗೂ ಜು.೨೦ರಂದು ವಂಡ್ಸೆ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಬೈಂದೂರು ತಾಲೂಕಿನಲ್ಲಿ ಜು.೧೫ರಂದು ಹಳ್ಳಿಹೊಳೆ ಗ್ರಾಪಂ, ಜು. ೧೭ರಂದು ಬೈಂದೂರು ತಾಲೂಕು ಕಚೇರಿ ಆಹಾರ ಶಾಖೆ, ಜು.೨೦ರಂದು ಕೊಲ್ಲೂರು ಗ್ರಾಪಂ ಕಚೇರಿ ಹಾಗೂ ಮರವಂತೆ ಗ್ರಾಪಂ ಕಚೇರಿಯಲ್ಲಿ ಶಿಬಿರ ಏರ್ಪಡಿಸಲಾಗುವುದು. ಕಾರ್ಕಳ ತಾಲೂಕಿನಲ್ಲಿ ಜು.೧೭ರಂದು ಕಾರ್ಕಳ ತಾಲೂಕು ಕಚೇರಿ, ನಲ್ಲೂರು ಗ್ರಾಪಂ ಹಾಗೂ ಬೆಳ್ಮಣ್ ಗ್ರಾಪಂ ಕಚೇರಿ ಯಲ್ಲಿ, ಜು.೧೮ರಂದು ಅಜೆಕಾರು ನಾಡ ಕಚೇರಿ, ಮಾಳ ಗ್ರಾಪಂ ಕಚೇರಿ ಹಾಗೂ ಈದು ಗ್ರಾಪಂ ಕಚೇರಿಯಲ್ಲಿ ಶಿಬಿರ ನಡೆಯಲಿದೆ. ಹೆಬ್ರಿ ತಾಲೂಕಿ ನಲ್ಲಿ ಜು.೧೫ರಂದು ಹೆಬ್ರಿ ತಾಲೂಕು ಕಚೇರಿ, ಬೆಳ್ವೆ ಅಂಚೆ ಕಚೇರಿ ಹಾಗೂ ಮುದ್ರಾಡಿ ಅಂಚೆ ಕಚೇರಿಗಳಲ್ಲಿ ಶಿಬಿರ ಏರ್ಪಡಿಸಲಾಗುವುದು.

ಸಾರ್ವಜನಿಕರು ಪಡಿತರ ಹಣ ವರ್ಗಾವಣೆ ಬಗ್ಗೆ ವೆಬ್‌ಸೈಟ್ - https://ahara.kar.nic.in /status2/- ಮೂಲಕ ನೇರ ನಗದು ಪಾವತಿ ಯಾದ ಕುರಿತು ಪರಿಶೀಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧ ಪಟ್ಟ ತಾಲೂಕು ಆಹಾರ ಶಾಖೆಯನ್ನು ಸಂಪರ್ಕಿಸುವಂತೆ ಹಾಗೂ ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News