ಭಾರೀ ಮಳೆಗೆ ಉಡುಪಿ ನಗರ ತತ್ತರ: ಜನಜೀವನ ಅಸ್ತವ್ಯಸ್ತ
ಉಡುಪಿ, ಜು.6: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಂದ್ರಾಣಿ ನದಿಯು ಉಕ್ಕಿ ಹರಿಯುತ್ತಿದ್ದು, ಇದರಿಂದ ಉಡುಪಿ ನಗರದ ಬಹುತೇಕ ಪ್ರದೇಶಗಳು ಜಲಾವೃತ್ತಗೊಂಡಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಹಲವು ಕುಟುಂಬಗಳನ್ನು ಸ್ಥಳಾಂತರಿಸ ಲಾಗಿದೆ. ಒಟ್ಟಾರೆಯಾಗಿ ಇಡೀ ನಗರ ತತ್ತರಿಸಿ ಹೋಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಕಲ್ಸಂಕ, ಬೈಲಕೆರೆ, ತೆಂಕಪೇಟೆ, ವಿದ್ಯಾ ಸಮುದ್ರ ಮಾರ್ಗ, ಮಠದ ಬೆಟ್ಟು, ಗುಂಡಿಬೈಲು, ನಿಟ್ಟೂರು, ಬನ್ನಂಜೆ ಮೂಡನಿಡಂಬೂರು ಪ್ರದೇಶಗಳಲ್ಲಿ ಬೆಳಗಿನ ಜಾವ 4ಗಂಟೆಗೆ ನೀರು ಏರಿಕೆಯಾಗಿ ಮನೆಯೊಳಗೆ ನುಗ್ಗಿತ್ತೆನ್ನಲಾಗಿದೆ. ಅದೇ ರೀತಿ ನಗರದ ಹೊರವಲಯ ಅಂಬಲಪಾಡಿ ಬಂಕೆರಕಟ್ಟೆ, ಕೊಡಂಕೂರು, ಕೊಡವೂರು, ಮಲ್ಪೆ, ಕೆಮ್ತೂರು, ಉದ್ಯಾವರ, ಕಡೆಕಾರ್ ಮೊದಲಾದ ಪ್ರದೇಶ ಗಳಲ್ಲಿಯೂ ನೆರೆ ಕಾಣಿಸಿಕೊಂಡಿದೆ.
ಈ ಎಲ್ಲ ಪ್ರದೇಶಗಳಲ್ಲಿ ಒಟ್ಟು 200ಕ್ಕೂ ಅಧಿಕ ಮನೆಗಳು ಜಲಾವೃತ್ತ ಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿದ್ದ ಮನೆಗಳಿಂದ ಅಗ್ನಿಶಾಮಕದಳ, ಗೃಹರಕ್ಷಕ ದಳ, ನಗರಸಭೆ ಕಾರ್ಯಪಡೆ, ಸ್ಥಳೀಯರು ಕಾರ್ಯಾಚರಣೆ ನಡೆಸಿ ಸುಮಾರು 100ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ಮಾರ್ಗದರ್ಶನದಲ್ಲಿ ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ಮುಹಮ್ಮದ್ ಗೌಸ್ ನೇತೃತ್ವದ ತಂಡ ಬನ್ನಂಜೆ, ಮೂಡನಿಡಂಬೂರು ಮತ್ತು ಕರಾವಳಿ ಬೈಪಾಸ್‌ನಲ್ಲಿರುವ ಶಾರದಾ ಇಂಟರ್‌ನ್ಯಾಶನಲ್ ಹೊಟೇಲಿನ ಹಿಂಬದಿಯಲ್ಲಿನ ನೂರಾರು ಮನೆಗಳಿಂದ 70ಕ್ಕೂ ಅಧಿಕ ಮಂದಿಯನ್ನು ಬೋಟು ಹಾಗೂ ರೋಪಿನ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು.
ಇದರಲ್ಲಿ ಹೆಚ್ಚಿನವರು ತಮ್ಮ ಸಂಬಂಧಿಕರ ಮನೆಗಳಿಗೆ ಹೋದರೆ, ಇನ್ನು ಕೆಲವರು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿನ ಕಾಳಜಿ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಉಳಿದವರು ಮನೆ ಬಿಟ್ಟು ಬರಲು ಒಪ್ಪದೆ ತಮ್ಮ ಮನೆಯ ಮೇಲಂತಸ್ತಿನಲ್ಲಿ ತಂಗಿದ್ದಾರೆ. ಅದೇ ರೀತಿ ಶ್ರೀಕೃಷ್ಣ ಮಠದ ಬೈಲಕೆರೆಯಲ್ಲಿರುವ ಹಲವು ಮನೆಗಳು ಜಲಾವೃತ್ತಗೊಂಡಿದ್ದು, ಇಲ್ಲಿಂದ 35 ಮಂದಿಯನ್ನು ರಕ್ಷಣೆ ಮಾಡಿ, ಮಥುರಾ ಛತ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಗುಂಡಿಬೈಲು ಮನೆಯೊಂದರಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸರ್ವೆಯರ್ ಅಧಿಕಾರಿಯೊಬ್ಬರನ್ನು ಬೋಟಿನ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆ ತರಲಾಯಿತು.
ಮಠದಬೆಟ್ಟುವಿನ ಇಡೀ ರಸ್ತೆಯೇ ನೀರಿನಿಂದ ತುಂಬಿ ಹೋಗಿದ್ದು, ಸೊಂಟದ ವರೆಗೆ ನೀರು ಏರಿಕೆಯಾಗಿದೆ. ಇಲ್ಲಿನ ಮನೆಮಂದಿಯನ್ನು ಸ್ಥಳಾಂತರಿ ಸುವ ನಿಟ್ಟಿನಲ್ಲಿ ಅಗ್ನಿಶಾಮಕದಳ ಹಾಗೂ ಸ್ಥಳೀಯ ನಗರಸಭೆ ಸದಸ್ಯೆ ಸವಿತಾ ಹರೀಶ್ ರಾಂ ಮನವೊಲಿಸುವ ಕಾರ್ಯ ನಡೆಸಿದರು. ಕೆಲವರು ಸ್ವತಃ ತಾವಾಗಿಯೇ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದರು. ಇನ್ನು ಕೆಲವರು ಹೋಗಲು ಒಪ್ಪದೆ ತಮ್ಮ ಮನೆಗಳಲ್ಲಿ ನೀರಿನ ಮಧ್ಯೆ ಉಳಿದು ಕೊಂಡರು. ಇಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸೋಫಾ ಸೆಟ್, ಫ್ರಿಜ್ಢ್, ಇಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ತೆಂಕಪೇಟೆ ರಸ್ತೆ ಮುಳುಗಡೆ: ಅಂಗಡಿಗಳಿಗೆ ನುಗ್ಗಿದ ನೀರು
ಕಲ್ಸಂಕ ಸಮೀಪದ ತೆಂಕಪೇಟೆ ರಸ್ತೆಯು ಸಂಪೂರ್ಣ ಜಲಾವೃತ್ತಗೊಂಡಿದ್ದು, ಇಲ್ಲಿನ ಹಲವು ಅಂಗಡಿಮುಗ್ಗಟ್ಟುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಈ ರಸ್ತೆ ಪ್ರತಿವರ್ಷ ಕೂಡ ನೆರೆಯಿಂದ ತತ್ತರಿಸುತ್ತಿದ್ದು, ಈ ಬಾರಿಯೂ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಇಲ್ಲಿನ ದಿನಸಿ ಅಂಗಡಿಯ ಸೊತ್ತುಗಳು, ಹೊಟೇಲು, ಬಟ್ಟೆ ಅಂಗಡಿಗಳ ಸೊತ್ತುಗಳು ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕದಳದಿಂದ 130 ಮಂದಿಯ ರಕ್ಷಣೆ
ಮುಂಜಾನೆ ನಾಲ್ಕು ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಸಿದ ಕಾರ್ಯಾ ಚರಣೆಯಲ್ಲಿ ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ನೆರೆ ಪೀಡಿತ ಪ್ರದೇಶಗಳ ಮನೆಯಿಂದ ಒಟ್ಟು 130 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ತಿಳಿಸಿದ್ದಾರೆ.
ನಗರ ಮಾತ್ರವಲ್ಲದೆ ಪಡುಬಿದ್ರಿ, ಪಾಂಗಾಳ, ಕುಂಜಾರುಗಿರಿ, ಪಾಜಕ ಸೇರಿದಂತೆ ವಿವಿಧ ಕಡೆಗಳಲ್ಲಿಯೂ ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇಲ್ಲಿಂದ 30-40ಮಂದಿಯನ್ನು ರಕ್ಷಿಸಿ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದ್ದೇವೆ. ಅಗ್ನಿಶಾಮಕದಳದ 40 ಸಿಬಂದಿ ಮೂರು ಬೋಟುಗಳಲ್ಲಿ ಹಾಗೂ ಗೃಹರಕ್ಷದ ದಳದ 25 ಸಿಬ್ಬಂದಿ ಎರಡು ಬೋಟಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.