ಉಡುಪಿ: ಬಿರುಸು ಪಡೆಯುತ್ತಿರುವ ಮಳೆ; ಹಲವು ಮನೆಗಳಿಗೆ ಹಾನಿ
ಉಡುಪಿ, ಜೂ.24: ಎರಡು ತಿಂಗಳ ವಿಳಂಬದ ಬಳಿಕ ಮುಂಗಾರು ಜಿಲ್ಲೆಯಲ್ಲಿ ಇದೀಗ ನಿಧಾನವಾಗಿ ಬಿರುಸು ಪಡೆಯುತ್ತಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯು 5ಸೆ.ಮಿ. ಮಳೆಯನ್ನು ಕಂಡಿದೆ. ಈ ನಡುವೆ ಗಾಳಿ-ಮಳೆಯಿಂದ ಮನೆಗಳಿಗೆ ಹಾಗೂ ಇತರ ಸೊತ್ತುಗಳಿಗೆ ಹಾನಿಯುಂಟಾಗುವ ಘಟನೆಗಳು ವರದಿಯಾಗುತ್ತಿವೆ.
ಇಂದು ಬೆಳಗ್ಗೆ ಮುಕ್ತಾಯಗೊಂಡಂತೆ ಜಿಲ್ಲೆಯಲ್ಲಿ ಹಿಂದಿನ 24 ಗಂಟೆಯಲ್ಲಿ ಸರಾಸರಿ 53.6ಮಿ.ಮೀ. ಮಳೆಯಾಗಿದೆ. ಕಾಪುವಿನಲ್ಲಿ ಅತ್ಯಧಿಕ 74.6ಮಿ.ಮೀ. ಮಳೆಯಾದರೆ, ಹೆಬ್ರಿಯಲ್ಲಿ ಕನಿಷ್ಠ 44.9ಮಿ.ಮೀ. ಮಳೆಯಾದ ವರದಿಗಳು ಬಂದಿವೆ. ಉಳಿದಂತೆ ಬೈಂದೂರಿನಲ್ಲಿ 62.4, ಬ್ರಹ್ಮಾವರದಲ್ಲಿ 59.5, ಉಡುಪಿಯಲ್ಲಿ 51.8, ಕುಂದಾಪುರದಲ್ಲಿ 49.9 ಹಾಗೂ ಕಾರ್ಕಳದಲ್ಲಿ 47.7ಮಿ.ಮೀ. ಮಳೆಯಾಗಿದೆ.
ಗಾಳಿ-ಮಳೆಯಿಂದಾಗಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಅಲೆವೂರು ಗ್ರಾಪಂನ ಪ್ರಗತಿ ನಗರದಲ್ಲಿ ರಮೇಶ್ ಆಚಾರ್ಯ ಎಂಬವರ ಮನೆಯ ಗೋಡೆ ಕುಸಿದು ಒಂದು ಲಕ್ಷ ರೂ.ನಷ್ಟ ಸಂಭವಿಸಿದೆ.
ಉಳಿದಂತೆ ಕುಂದಾಪುರ ತಾಲೂಕಿನ ಹೆಮ್ಮಾಡಿಯ ನೀಲು ಎಂಬವರ ಮನೆ ಮೇಲೆ ಮರಬಿದ್ದು 30 ಸಾವಿರ, ಚಂದ್ರ ಎಂಬವರ ಮನೆ ಮೇಲೆ ಮರಬಿದ್ದು 35 ಸಾವಿರ, ತೆಕ್ಕಟ್ಟೆಯ ಗೋವಿಂದ ಎಂಬವರ ಮನೆಯ ಮಾಡು ಹಾಗೂ ಸಿಮೆಂಟ್ ಸೀಟುಗಳು ಗಾಳಿಗೆ ಹಾರಿಹೋಗಿ 15 ಸಾವಿರ ಹಾಗೂ ಬಸ್ರೂರಿನ ಮುತ್ತು ಮಡಿವಾಳ್ತಿ ಅವರ ಮನೆ ಭಾಗಶ: ಹಾನಿಗೊಂಡು 25ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ರವಿವಾರ ಕರಾವಳಿಯಲ್ಲಿ ಆರೆಂಜ್ ಎಚ್ಚರಿಕೆ ನೀಡಲಾಗಿದ್ದು, ನಂತರದ ನಾಲ್ಕು ದಿನಗಳ ಕಾಲ ಎಲ್ಲೋ ಎಚ್ಚರಿಕೆ ನೀಡಲಾಗಿದೆ. ಇಂದು ದಿನದ ಗರಿಷ್ಠ ಉಷ್ಣಾಂಶ 29.72 ಡಿಗ್ರಿ ಸೆಲ್ಷಿಯಸ್ ಇದ್ದರೆ, ಕನಿಷ್ಠ 24.27 ಡಿಗ್ರಿ ಇತ್ತು. ಮಳೆಯೊಂದಿಗೆ ಜೋರಾದ ಗಾಳಿಯೂ ಬೀಸುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಮುನ್ಸೂಚನೆ ನೀಡಲಾಗಿದೆ.