ಉಡುಪಿ: ಅಕ್ರಮ ಆಸ್ತಿ ಹೊಂದಿದ ಸರಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ದಂಡ
ಉಡುಪಿ, ಜು.7: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ ಸರಕಾರಿ ಅಧಿಕಾರಿಗೆ ಉಡುಪಿಯ ಜಿಲ್ಲಾ ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸರಕಾರಿ ಅಧಿಕಾರಿಯಾದ ಆರೋಪಿ ಅಬ್ದುಲ್ ಅಝೀಝ್ ಕುಂದಾಪುರ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ ಅಂದಿನ ಪಿ.ಐ ಕೆ.ಯು. ಬೆಳ್ಳಿಯಪ್ಪ ಇವರು ಮಾಹಿತಿಯನ್ನು ಸಂಗ್ರಹಿಸಿ, ದೂರು ನೀಡಿದ ಮೇರೆಗೆ ಅಂದಿನ ಮಂಗಳೂರು ಪೊಲೀಸ್ ವಿಭಾಗದ ಎಸ್‌ಪಿ ಧರ್ಮರಾಜ್ ಎ.ಜಿ. ಅವರು ಪ್ರಕರಣ ದಾಖಲಿಸಿ, ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆಪಾದಿತರ ಮನೆ ಶೋಧ ನಡೆಸಲು ಸರ್ಚ್ ವಾರೆಂಟ್ ಪಡೆದು ಎಸ್ಪಿ ಹಾಗೂ ಉಡುಪಿಯ ಪ್ರಭಾರ ಡಿವೈಎಸ್ಪಿ ಆಪಾದಿತ ಸರಕಾರಿ ಅಧಿಕಾರಿಯ ಮನೆ ಹಾಗೂ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ನಡೆಸಿದ್ದರು.
ಪ್ರಕರಣದ ಮುಂದಿನ ತನಿಖೆ ಕೈಗೊಂಡ ಲೋಕಾಯುಕ್ತ ಡಿವೈಎಸ್ಪಿ ಪ್ರಭುದೇವ ಬಿ. ಮಾನೆ, ಆಪಾದಿತ ಸರಕಾರಿ ಅಧಿಕಾರಿಯು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ ಆಸ್ತಿಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಅಂತಿಮ ವರದಿಯನ್ನು ಆಪಾದಿತರ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು.
ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್ ಇವರು ಆಪಾದಿತ ಸರಕಾರಿ ಅಧಿಕಾರಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ಆರೋಪಿ ಅಬ್ದುಲ್ ಅಝೀಝ್ ಗೆ ಕಲಂ. 13(1)(ಇ), 13(2) ಪಿ.ಸಿ. ಕಾಯಿದೆ 1988ರಲ್ಲಿ ಒಂದು ವರ್ಷದ ಸಾದಾ ಸಜೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಪ್ರಸ್ತುತ ಅಬ್ದುಲ್ ಅಝೀಝ್ ಸೇವೆಯಿಂದ ನಿವೃತ್ತರಾಗಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಟಿ. ವಿಜಯ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.