ಉಡುಪಿ: ಡಾ.ಭರಣ್ಯ, ಡಾ.ನಾಯಕ್‌ರಿಗೆ ಕೇಶವ ಪ್ರಶಸ್ತಿ
ಉಡುಪಿ, ಜು.13: ಕನ್ನಡದ ಹಿರಿಯ ವಿದ್ವಾಂಸ ಡಾ.ಹರಿಕೃಷ್ಣ ಭರಣ್ಯ ಹಾಗೂ ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ್ ಅವರನ್ನು ಕ್ರಮವಾಗಿ 2022 ಹಾಗೂ 2023ರ ಸಾಲಿನ ಕೇಶವ ಭಟ್ಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯವರಾದ ಡಾ. ಹರಿಕೃಷ್ಣ ಭರಣ್ಯ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ, ಮದ್ರಾಸ್ ವಿವಿಯಿಂದ ಎಂ.ಫಿಲ್ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಯಲ್ಲಿ ಸಂಶೋಧಕರಾಗಿ ಕರ್ತವ್ಯ ನಿರ್ವಸಿದ್ದರು.
ಮದುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಂಶೋಧನೆ- ಪ್ರವೇಶ, ಸಂಶೋಧನ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಹವ್ಯಕಾಧ್ಯಯನ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಇತ್ಯಾದಿ ಅವರ ಕೃತಿಗಳು. ’ದೊಡ್ಡಜಾಲು’ ಎಂಬ ಹಗನ್ನಡದ ಪ್ರಥಮ ಕಾದಂಬರಿ ಜೊತೆಗೆ ನಾಟಕಗಳು, ಕತೆಗಳು, ಲಲಿತ ಪ್ರಬಂಧಗಳು ಮೊದಲಾದ ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಡಾ.ಭರಣ್ಯರಿಗೆ ಹವಿಗನ್ನಡ ಸೂರಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಬಾಳಿಲ ಪ್ರಶಸ್ತಿ, ಕವಿ ಮಂದಾರ ಸನ್ಮಾನ ಪ್ರಶಸ್ತಿಗಳು ಲಭಿಸಿವೆ. ಹವಿಗನ್ನಡ ಮಾತೃಭಾಷೆಯಿವರು ಹೊನ್ನಾವರದಲ್ಲಿ ನಡೆದ ಪ್ರಥಮ ಹವಿಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಡಾ.ಎನ್.ಆರ್.ನಾಯಕ್:ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಭಾವಿಕೇರಿಯ ಡಾ.ಎನ್.ಆರ್.ನಾಯಕ್ ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕುಮಟಾದಲ್ಲಿ ನಡೆದ ಉ.ಕ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನ, ಗೋಕರ್ಣದಲ್ಲಿ ನಡೆದ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಶಿರಸಿಯಲ್ಲಿ ನಡೆದ 27ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಎನ್.ಆರ್.ನಾಯಕ್ ಅವರು ಸುಮಾರು 98ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ 54 ಗ್ರಂಥಗಳು ಜಾನಪದಕ್ಕೆ ಸಂಬಂಧಿಸಿದ್ದು, ಉಳಿದವು ನಾಟಕ, ಸಾಹಿತ್ಯ, ಸಂಸ್ಕೃತಿ, ಅನುಭವ ಕಥನಗಳು. ಅವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕು.ಶಿ ಜಾನಪದ ಪ್ರಶಸ್ತಿ, ಭೂತಾಳ ಪಾಂಡ್ಯ ಪ್ರಶಸ್ತಿಗಳನ್ನೊಳಗೊಂಡಂತೆ ಹಲವಾರು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ.