ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಹೊಂಡಮಯ; ವಾಹನ ಸಂಚಾರಕ್ಕೆ ಕಂಟಕ

Update: 2023-07-15 13:45 GMT

ಉಡುಪಿ, ಜು.15: ಉಡುಪಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕಳೆದ ಬಾರಿಯಂತೆ ಈ ವರ್ಷದ ಮಳೆಗಾಲದ ಆರಂಭದಲ್ಲಿಯೇ ಸಂಪೂರ್ಣ ಗುಂಡಿಮಯವಾಗಿದೆ. ಹೆದ್ದಾರಿ ಮಧ್ಯೆ ಅಲ್ಲಲ್ಲಿ ಕಂಡುಬರುವ ಹೊಂಡಗಳು ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.

ಕಳೆದ ವರ್ಷ ಮಳೆಗಾಲಕ್ಕೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹೊಂಡಗಳು ತುಂಬಿ ಹೋಗಿದ್ದವು. ಇದರ ವಿರುದ್ಧ ಸಾಕಷ್ಟು ಹೋರಾಟಗಳು ಕೂಡ ನಡೆದಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿವರ್ಷ ಹೊಂಡ ಬೀಳುವ ಜಾಗವನ್ನು ಗುರುತಿಸಿ, ಅಲ್ಲಿ ಡಾಮರನ್ನು ಕಿತ್ತು ತೆಗೆದು ಮರುಡಾಮರೀಕರಣ ಮಾಡಿತ್ತು.

ಅದೇ ರೀತಿ ಈ ಬಾರಿಯ ಮೊದಲ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಡೆ ತೇಪೆ ಹಾಕಲಾದ ಡಾಮರು ಕಿತ್ತು ಹೋಗಿದ್ದು, ಮತ್ತೆ ಗುಂಡಿಗಳು ಕಾಣಿಸಿಕೊಂಡಿವೆ. ಇದೀಗ ನಿರಂತರ ಸುರಿದ ಮಳೆಯಿಂದಾಗಿ ಹೆಜಮಾಡಿ ಯಿಂದ ಕುಂದಾಪುರವರೆಗಿನ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ಕಾಣಿಸಿ ಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದೆ.

ಉಡುಪಿ ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ ಬಳಿ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿವೆ. ಬೃಹತ್ ಆಕಾರದ ಹೊಂಡಗಳಿಂದ ವಾಹನ ಸಂಚಾ ರವೇ ದುಸ್ತರ ಎನಿಸಿದೆ. ಉದ್ಯಾವರ, ಕಾಪು, ಕಟಪಾಡಿ, ಪಡುಬಿದ್ರಿ, ಬ್ರಹ್ಮಾವರ, ಕೋಟ ಸೇರಿದಂತೆ ಹಲವು ಭಾಗಗಳಲ್ಲಿನ ಹೆದ್ದಾರಿಯಲ್ಲೂ ಬೃಹತ್ ಆಕಾರದ ಹೊಂಡಗಳು ಕಾಣಿಸಿಕೊಂಡಿವೆ.

ವಾಹನ ಸವಾರರಿಗೆ ಕಂಟಕ

ರಾತ್ರಿ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಈ ಹೊಂಡಗಳು ಕಂಟಕವಾಗಿ ಪರಿಣಿಮಿಸಿದೆ. ಎದುರಿನ ವಾಹನಗಳ ಹೆಡ್‌ಲೈಟ್‌ನಿಂದ ಗುಂಡಿ ಕಾಣದೆ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಟ್ಟು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಲವು ಕಡೆ ಅಪಘಾತಗಳು ಕೂಡ ಸಂಭವಿಸಿ ರುವ ಬಗ್ಗೆ ವರದಿಯಾಗಿದೆ.

ಅಲ್ಲದೆ ಉದ್ಯಾವರ ಸೇರಿದಂತೆ ಕೆಲವು ಕಡೆ ಪ್ಯಾಚ್‌ವರ್ಕ್ ಮಾಡಲಾದ ಡಾಮರು ಕಿತ್ತು ಹೋಗಿ ಜಲ್ಲಿ ಪುಡಿಗಳು ರಸ್ತೆಯಲ್ಲಿಯೇ ಉಳಿದುಕೊಂಡಿದೆ. ಇದರಿಂದ ದ್ವಿಚಕ್ರ ವಾಹನಗಳು ಸ್ಲಿಪ್ ಆಗಿ ಬೀಳುವ ಸಾಧ್ಯತೆ ಇರುತ್ತದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತುಕೊಂಡು ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಾಧಿಕಾರ ನೀಡಿದ ಸೂಚನೆಯಂತೆ ನವಯುಗ ಕಂಪೆನಿಯವರು ಹೊಂಡ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಹೆಜಮಾಡಿ ಯಿಂದ ಕುಂದಾಪುರವರೆಗಿನ ಹಲವು ಹೊಂಡಗಳನ್ನು ಮುಚ್ಚಲಾಗಿದೆ. ಈ ನಿಟ್ಟಿನಲ್ಲಿ ರಾತ್ರಿ ಹಗಲು ಕೆಲಸ ಮಾಡಲಾಗುತ್ತಿದೆ. ಇನ್ನು ಎರಡು ಮೂರು ದಿನಗಳಲ್ಲಿ ಎಲ್ಲ ಹೊಂಡಗಳನ್ನು ಮುಚ್ಚಲಾಗುವುದು ಎಂದು ಟೋಲ್ ಉಸ್ತುವಾರಿ ಶಿವಪ್ರಸಾದ್ ತಿಳಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಪರಿಣಾಮ ಹೆದ್ದಾರಿ ಯುದ್ದಕ್ಕೂ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಎಲ್ಲ ಕಡೆಗಳಲ್ಲೂ ಬ್ಯಾರಿ ಕೇಡ್ ಹಾಕಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬ್ರಹ್ಮಾವರ, ಸಾಲಿಗ್ರಾಮ, ಕೋಟಗಳಲ್ಲಿ ಅತೀ ಹೆಚ್ಚು ಅಪಘಾತಗಳು ನಡೆಯುತ್ತಿವೆ. ಅವೈಜ್ಞಾನಿಕ ತಿರುವು ಸೇರಿದಂತೆ ಎಲ್ಲ ರೀತಿಯ ಲೋಪಗಳ ಬಗ್ಗೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ ಒತ್ತಾಯಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ 66 ಹೊಂಡಮಯವಾಗಿದೆ. ಒಂದೇ ಮಳೆಗೆ ಡಾಮರು ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ. ಬೀದಿ ದೀಪಗಳು ಸರಿಯಾಗಿ ಉರಿಯು ತ್ತಿಲ್ಲ. ರಾತ್ರಿ ವೇಳೆ ಕತ್ತಲಲ್ಲಿ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ಈ ಬಗ್ಗೆ ಹೆದ್ದಾರಿ ಜಾಗೃತ ಸಮಿತಿಯ ವತಿಯಿಂದ ಇಲಾಖೆಗೆ ಮನವಿ ಸಲ್ಲಿಸ ಲಾಗಿದೆ. 15 ದಿನಗಳಲ್ಲಿ ಎಲ್ಲ ಹೊಂಡ ಮುಚ್ಚುತ್ತೇವೆ ಮತ್ತು ದಾರಿದೀಪ ಗಳನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಇಲ್ಲದಿದ್ದರೆ ಮುಂದೆ ಇದರ ವಿರುದ್ಧ ಉಗ್ರವಾದ ಹೋರಾಟ ಮಾಡಲು ನಿರ್ಧರಿಸಿದ್ದೇವೆ’.

-ಆಲ್ವಿನ್ ಅಂದ್ರಾದೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News