ಉಡುಪಿ: ಮಳೆಗೆ ವಿರಾಮ, ತಗ್ಗಿದ ನೆರೆ ಭೀತಿ; ಸಾಮಾನ್ಯದತ್ತ ಜನಜೀವನ
ಉಡುಪಿ, ಜು.7: ಮೂರು ದಿನಗಳ ಕಾಲ ಸತತವಾಗಿ ಧಾರಾಕಾರವಾಗಿ ಸುರಿದ ಮಳೆ, ರೆಡ್ ಅಲರ್ಟ್ ಹೊರತಾಗಿಯೂ ಇಂದು ದಿನವಿಡೀ ವಿರಾಮ ಪಡೆದಿದ್ದು, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು ಇಳಿದುಹೋಗಿದೆ. ಹೀಗಾಗಿ ನೆರೆ ಭೀತಿಯಲ್ಲಿದ್ದ ಜನತೆ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿದೆ.
ಶುಕ್ರವಾರ ಅಪರಾಹ್ನದ ವೇಳೆಗೆ ಅಲ್ಲಲ್ಲಿ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ, ಉಳಿದಂತೆ ದಿನವಿಡೀ ಆಕಾಶ ಶುಭ್ರವಾಗಿತ್ತು. ಆದರೆ ಸಂಜೆಯ ಬಳಿಕ ಮತ್ತೆ ಸಾಧಾರಣ ಮಳೆ ಸುರಿಯತೊಡಗಿದೆ. ರೆಡ್ ಅಲರ್ಟ್ ಕಾರಣಕ್ಕಾಗಿ ಸತತ ಮೂರನೇ ದಿನವಾದ ಇಂದು ಸಹ ಶಾಲಾ-ಕಾಲೇಜು ಮಕ್ಕಳಿಗೆ ರಜೆ ಘೋಷಿಸಲಾಗಿತ್ತು.
ಜಿಲ್ಲೆಯಲ್ಲಿ ಮೂರು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ಕಾಪುವಿನ ಎಂಪಿಸಿಎಸ್ ಪಡು ಕೇಂದ್ರ ಹಾಗೂ ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಕೇಂದ್ರದಲ್ಲಿ ಯಾರೂ ಸಹ ಆಶ್ರಯ ಪಡೆದಿಲ್ಲ. ಆದರೆ ಉದ್ಯಾವರ ನಾರಾಯಣಗುರು ಸಭಾಭವನ ಕೇಂದ್ರದಲ್ಲಿ 9 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಜಿಲ್ಲಾಡಳಿತದ ವತಿಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಕರಾವಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ನಂತರದ ಎರಡು ದಿನ ಯೆಲ್ಲೋ ಅಲರ್ಟ್ ಇದ್ದು, ನಂತರ ಸಾಮಾನ್ಯ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಜೆ ಡ್ಯಾಂನಲ್ಲಿ ಇಂದಿನ ನೀರಿನ ಮಟ್ಟ 6.55ಮೀ. ಆಗಿದ್ದರೆ, ಕಾರ್ಕಳದ ಮುಂಡ್ಲಿಯಲ್ಲಿ ನೀರಿನ ಮಟ್ಟ 6.7ಮಿ. ಇದೆ.
91.6ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 91.6ಮಿ.ಮೀ.ಮಳೆಯಾಗಿದೆ. ಅತ್ಯಧಿಕ ಮಳೆ ಉಡುಪಿಯಲ್ಲಿ 112.5ಮೀ.ಮೀ. ಬಂದಿದ್ದರೆ, ಬ್ರಹ್ಮಾವರ ಹಾಗೂ ಕಾಪುಗಳಲ್ಲಿ ಕನಿಷ್ಠ ತಲಾ 84.0ಮಿ.ಮೀ. ಮಳೆಯಾಗಿದೆ. ಉಳಿದಂತೆ ಕಾರ್ಕಳದಲ್ಲಿ 100.0ಮಿ.ಮೀ., ಹೆಬ್ರಿಯಲ್ಲಿ 88.9, ಕುಂದಾಪುರದಲ್ಲಿ 87.4 ಹಾಗೂ ಬೈಂದೂರಿನಲ್ಲಿ 86.7ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಗಾಳಿ-ಮಳೆಯಿಂದ 22 ಮನೆಗಳಿಗೆ ಹಾನಿಯಾಗಿರುವ ಅಧಿಕೃತ ಮಾಹಿತಿ ಬಂದಿದೆ. ಇದರಿಂದ ಲಕ್ಷಾಂತರ ರೂ. ನಷ್ಟದ ಅಂದಾಜ ಮಾಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ 12, ಉಡುಪಿಯಲ್ಲಿ 5, ಬ್ರಹ್ಮಾವರ 2, ಕಾಪು 2 ಹಾಗೂ ಕಾರ್ಕಳದಲ್ಲಿ ಒಂದು ಮನೆಗೆ ಹಾನಿಯಾಗಿದೆ.
ಮೂಡುತೋನ್ಸೆಯಲ್ಲಿ ಸುಂದರ್ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು ಐದು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಕಿದಿಯೂರು ಗಂಗಾವತಿ ಮನೆಗೆ ಒಂದು ಲಕ್ಷರೂ., ಹೊಂಬಾಡಿ ಮಂಡಾಡಿಯ ರಾಧಾ ಎಂಬವರ ಮನೆಗೆ ಒಂದು ಲಕ್ಷ, ಉದ್ಯಾವರದ ದಿನೇಶ್ ಎಂಬವರ ಮನೆಗೆ 90,000ರೂ., ತಲ್ಲೂರಿನ ಮುತ್ತು ಎಂಬವರ ಮನೆಗೆ ಒಂದು ಲಕ್ಷ ರೂ.ನಷ್ಟವಾಗಿರುವ ವರದಿ ಬಂದಿದೆ.
ಅಲ್ಲದೇ ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ನಾರಾಯಣ ಪೂಜಾರಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಭಾಗಶ: ಹಾನಿಯಾಗಿರುವ ವರದಿಯೂ ಬಂದಿದೆ.
ಜಿಲ್ಲೆಯಲ್ಲಿ ಮತ್ತೆರಡು ಜೀವಹಾನಿ
ಜಿಲ್ಲೆಯಲ್ಲಿ ಇನ್ನೂ ಎರಡು ಜೀವ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದೆ. ಈ ಬಾರಿ ಕಾರ್ಕಳ ತಾಲೂಕಿನಲ್ಲಿ ಇವು ಸಂಭವಿಸಿವೆ. ನಿಟ್ಟೆ ಗ್ರಾಮದ ರಾಜು ಬಿನ್ ವಿಠಲ ಅವರು ಜು.5ರಂದು ನದಿಗೆ ಜಾರಿಬಿದ್ದು ನಾಪತ್ತೆಯಾಗಿದ್ದು, ಗುರುವಾರ ಅವರ ಮೃತದೇಹ ಪತ್ತೆಯಾಗಿದೆ.
ಇನ್ನೊಂದು ಪ್ರಕರಣ ಗುರುವಾರ ತಡರಾತ್ರಿ ಬೆಳ್ಮಣ್ ಪೇಟೆ ಬಳಿ, ಬೆಳ್ಮಣ್-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದ್ದು, ಬೈಕ್ ಸವಾರ ರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಿಲಾರು ಗ್ರಾಮದ ಮಂಜುನಾಥ ಪ್ರವೀಣ್ ಆಚಾರ್ಯ (30) ಎಂದು ಗುರುತಿಸಲಾಗಿದೆ.
ಇವರು ಗುರುವಾರ ರಾತ್ರಿ ಕಾರ್ಕಳದಿಂದ ಮನೆಗೆ ಹಿಂದಿರುಗುವ ವೇಳೆ ಬೆಳ್ಮಣ್ ಪೇಟೆಯಲ್ಲಿ ಗಾಳಿ-ಮಳೆಗೆ ಇವರ ಬೈಕ್ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಇವರು ಸ್ಥಳದಲ್ಲೇ ಮೃತಪಟ್ಟಿದ್ದರು.ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಮರವನ್ನು ತೆರವುಗೊಳಿಸಿದರು.