ಯಕ್ಷಾಭರಣ ಅನಾವರಣ- ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪ್ರದಾನ

Update: 2023-07-04 13:59 GMT

ಉಡುಪಿ: ಕೋಟದ ವ್ಯವಸಾಯಿ ಯಕ್ಷ ತಂಡ ‘ಯಕ್ಷಾಂತರಂಗ’ದ ಸಪ್ತಮ ವಾರ್ಷಿಕೋತ್ಸವದ ಸಂಭ್ರಮಾಚರಣೆ, ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಥೆಗೆ ನೂತನ ಯಕ್ಷಾಭರಣ ‘ಯಕ್ಷ ವಿಭೂಷಣ’ದ ಅನಾವರಣ ಕಾರ್ಯಕ್ರಮವನ್ನು ಶನಿವಾರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಾಂತ ರಂಗ ಸಂಸ್ಥೆ ಇಂದು ತನ್ನದೇ ಆದ ಪರಿಪೂರ್ಣ ಯಕ್ಷಾಭರಣಗಳನ್ನು ಹೊಂದುವ ಮೂಲಕ ಕಲಾಸೇವೆಯ ಮತ್ತೊಂದು ಮಗ್ಗುಲನ್ನು ಮುಟ್ಟಿದೆ. ಪ್ರಬುದ್ಧ ಕಲಾವಿದರನ್ನು ಹೊಂದಿರುವ ಈ ಯಕ್ಷಾಂತರಂಗ ಯಕ್ಷಗಾನಕ್ಕೆ ವಿಭೂಷಣ ಎಂದು ಹೇಳಿದರು.

ನೂತನ ಯಕ್ಷಾಭರಣಗಳನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನಾವರಣಗೊಳಿಸಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶುಭ ಹಾರೈಸಿದರು. ಉಡುಪಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೆ.ಪಿ. ಶೇಖರ್, ತೆಕ್ಕಟ್ಟೆ ಕೈಲಾಸ ಕಲಾಕ್ಷೇತ್ರದ ಹಿರಿಯ ಮಾಸ್ಟರ್ ಮಾತನಾಡಿದರು.

ಅಧ್ಯಕ್ಷತೆಯನ್ನು ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ, ಯಕ್ಷಾಂತ ರಂಗದ ಅಧ್ಯಕ್ಷ ಆನಂದ ಸಿ.ಕುಂದರ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಂದಾರ್ತಿ ಮೇಳದ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗ ಅವರಿಗೆ ‘ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೋಟ ಡಾ.ಕಾರಂತ ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ ಮಣೂರು ಉಪಸ್ಥಿತರಿದ್ದರು.

ಯಕ್ಷಾಂತರಂಗದ ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿನಂದನಾ ನುಡಿಗಳನ್ನಾಡಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಬ್ರಹ್ಮಾವರ ವಾಚಿಸಿದರು. ಕೃಷ್ಣಮೂರ್ತಿ ಬ್ರಹ್ಮಾವರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News