ವಿಶೇಷ ಮಕ್ಕಳ ಶಾಲೆ ‘ಆಸರೆ’ಯಲ್ಲಿ ವಿವಿಧ ಕಾರ್ಯಕ್ರಮಗಳು

Update: 2023-07-01 15:48 GMT

ಮಣಿಪಾಲ, ಜು.1: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಅರ್ಚನಾ ಟ್ರಸ್ಟ್‌ನ ಜಂಟಿ ಯೋಜನೆಯಾದ ವಿಶೇಷ ಮಕ್ಕಳ ಶಾಲೆ ಹಾಗೂ ಪುನರ್ವಸತಿ ಕೇಂದ್ರವಾದ ‘ಆಸರೆ’ಯ 15ನೇ ವಾರ್ಷಿಕೋತ್ಸವ ನಿನ್ನೆ ಇಲ್ಲಿ ಜರಗಿತು.

ಮಾಹೆಯ ಪ್ರೊ ಚಾನ್ಸಲರ್ ಆಗಿರುವ ಡಾ.ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಶೇಷ ಮಕ್ಕಳ ಆಟದ ಮೈದಾನವನ್ನು ಉದ್ಘಾಟಿಸಿ ಮಾತನಾಡಿ, ಆಸರೆಯಲ್ಲಿರುವ ಮಕ್ಕಳಿಗೆ ನಿಮ್ಮ ಕರುಣೆ ಅಥವಾ ಸಹಾನುಭೂತಿಯ ಅಗತ್ಯವಿಲ್ಲ. ಅವರಿಗೆ ಅವಕಾಶವನ್ನು ನೀಡುವ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಆಸರೆಯಲ್ಲಿ ಮಕ್ಕಳಿಗೆ ನಿರ್ಮಿಸಲಾದ ಮೋಕಪ್ ರೂಮನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಆಸರೆಯಲ್ಲಿ ವಿಶೇಷ ಮಕ್ಕಳಿಗೆ ದೊರೆಯುತ್ತಿರುವ ಸೌಲಭ್ಯದ ಕುರಿತು ಹರ್ಷ ವ್ಯಕ್ತಪಡಿಸಿದರು. ಮಾಹೆಯ ಕುಲಪತಿ ಲೆ.ಜ.(ಡಾ.)ಎಂ.ಡಿ.ವೆಂಕಟೇಶ್ ಅವರು ಉಪಸ್ಥಿತರಿದ್ದರು.

ಆಸರೆಯ ಹಿರಿಯ ಶಿಕ್ಷಕ ರಮೇಶ್ ನಾಯ್ಕ್ ಅವರು ಆಸರೆಯ 2022-23ನೇ ಸಾಲಿನ ವರದಿಯನ್ನು ಮಂಡಿಸಿದರು. ಒಂದು ಗುರಿಯೊಂದಿಗೆ 2008ರಲ್ಲಿ ಪ್ರಾರಂಭಗೊಂಡ ಆಸರೆ ಸಂಸ್ಥೆ, ವಿಶೇಷ ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡುವ ಮೂಲಕ ತನ್ನ ಗುರಿಯನ್ನು ತಲುಪಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ಆಸರೆಯ ಮೂಲಕ ಬೆಳಕಿಗೆ ಬಂದ ಅಂತಾರಾಷ್ಟ್ರೀಯ ಅಥ್ಲೀಟ್ ಅರ್ಚನಾ, ಭರತನಾಟ್ಯವನ್ನು ಪ್ರಸ್ತುತ ಪಡಿಸಿದರೆ, ಬೈಂದೂರಿ ನಿಂದ ಬಂದ ಧನುಷ್ ಹಾಡೊಂದನ್ನು ಹಾಡಿ ಎಲ್ಲರನ್ನು ಅಚ್ಚರಿಗೊಳಿಸಿದ.

ಇದೇ ವೇಳೆ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಡಾ.ಎಂ.ಡಿ.ವೆಂಕಟೇಶ್ ಅವರು ಪೇಪರ್ ಪ್ಲೇಟ್ ಮಾಡುವ ಮೆಷಿನ್‌ನ್ನು ಉದ್ಘಾಟಿಸಿದ್ದು, ಇದಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುವುದಾಗಿ ಘೋಷಿಸಿದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ನಾರಾಯಣ ಸಭಾಹಿತ್, ಡಾ.ಎನ್.ಎನ್.ಶರ್ಮ, ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ ಅವರು ಉಪಸ್ಥಿತರಿದ್ದರು. ಜೈವಿಠಲ್ ಕಾರ್ಯಕ್ರಮ ನಿರೂಪಿಸಿದರೆ, ಆಸರೆಯ ಸಂಚಾಲಕ ಕರ್ನಲ್ ಪ್ರಕಾಶ್‌ಚಂದ್ರ ವಂದಿಸಿದರು.


 




 






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News